ಮಹಾಲಿಂಗಪುರ 28: ಕರುನಾಡು ಅನೇಕ ಮಹಾನ್ ಸತ್ಪೂರುಷರು, ಶರಣರು, ತಪಸ್ವಿಗಳು, ಮುಮುಕ್ಷಿಗಳು, ಮಹಾತ್ಮಾರು, ಸಿದ್ದಿ ಪುರುಷರು, ಅವದೂತರು, ಜ್ಞಾನಿಗಳು, ಪವಾಡ ಪುರುಷರನ್ನು ಕಂಡಿದ್ದು ಅವರಲ್ಲಿ ನವಲಗುಂದದ ನಾಗಲಿಂಗಸ್ವಾಮಿಗಳು ಒಬ್ಬರು. ಅವರು ಅನೇಕ ಪವಾಡಗಳನ್ನು ಮಾಡಿ ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಹೋರಾಡಿದ ಪವಾಡ ಪುರುಷರು ಎಂದು. ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಸಿದ್ದರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ನಡೆದ ನಾಗಲಿಂಗ ಚರಿತ್ರೆ ಸತ್ಸಂಗ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ನಾಗಲಿಂಗ ಮಹಾಸ್ವಾಮಿಗಳು ಫೋಟೋಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ನಾಗಲಿಂಗರು ಉತ್ತರ ಕರ್ನಾಟಕದಲ್ಲಿ ಚಿರಪರಿಚಿತರು ಅವರ ಸಮಕಾಲಿನ, ಸಿದ್ದರೂಢರು, ಸಂತ ಶಿಶುನಾಳ ಶರೀಫರು, ಗರಗದ ಮಡಿವಾಳರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ನಾಗಲಿಂಗರ ಪವಾಡ ಕಂಡು ಸಮಕಾಲಿನರು ಮೂಕ ವಿಸ್ಮಿತರಾಗಿದ್ದರು. ಅವರು ಬ್ರಹ್ಮ ಜ್ಞಾನವನ್ನು ಹೊಂದಿದ್ದರು. ಎಂದರು
ಪ್ರಸ್ತಾವಿಕವಾಗಿ ಮಾತನಾಡಿದ ಯುವ ಅಧ್ಯಾತ್ಮ ಚಿಂತಕ ಪ್ರಖರ ವಾಗ್ಮಿ ಮಹೇಶ ಇಟಕನ್ನವರ ಅಜಾತ ನಾಗಲಿಂಗರು ರಾಯಚೂರು ಜಿಲ್ಲೆಯ ಜವಳಗೇರಿ ಗ್ರಾಮದಲ್ಲಿ ಕ್ರಿ ಶ 1812 ರಲ್ಲಿ ಜನಿಸಿದರು ಇವರು ಜನಿಸುವ ಮೊದಲು ಇವರ ಮನೆಗೆ ಬಂದಿದ್ದ ಚಿದಾನಂದ ಅವದೂತರು ತಾವೇ ಬರೆದಿದ್ದ ಜ್ಞಾನಸಿಂಧು ಎಂಬ ಕೈಬರಹ ಪ್ರತಿಯನ್ನು ಕೊಟ್ಟು ಮುಂದೆ ಹುಟ್ಟುವ ಮಗ ಹನ್ನೆರಡರ ಪ್ರಾಯಕ್ಕೆ ಬಂದಾಗ ಓದಲು ಕೊಡಬೇಕೆಂದು ಸೂಚಿಸಿದರು. ಇದು ಭವಿಷ್ಯದಲ್ಲಿ ನಿಜವಾದದ್ದು ಯೋಗಾಯೋಗವೆ ಸರಿ. ಇವರು 1881 ರಲ್ಲಿ ದೈವಾಧೀನರಾದರು.
ಇವರು ಜನಿಸಿದ ನಾಡು ಜ್ಯೋತಿಯ ಪ್ರಕಾಶದಿಂದ ಕತ್ತಲೆಯು ತೊರೆದಂತೆ ಸ್ಪರ್ಶಮಣಿಯ ಸ್ಪರ್ಶದಿಂದ ಕಬ್ಬಿಣವು ಬಂಗಾರವಾದಂತೆ ಅಲ್ಲಿ ವಾಸಿಸುವಂಥ ಭಕ್ತರ ದುರ್ಗುಣಗಳು ದೂರಾಗಿ ದಾರಿದ್ರ್ಯ ನಿವಾರಣೆಯಾಗಿ ಧನ ಕನಕ ಸಂಪದ್ಭರಿತವಾಗಿ ಜವುಳಗಿರಿಯು ಪವಾಡಪುರುಷನ ಪುಣ್ಯಭೂಮಿಯೆಂದೇ ಪ್ರಖ್ಯಾತವಾಯಿತು.
ಮನುಷ್ಯ ಮನುಷ್ಯರನ್ನು ದ್ವೇಷಿಸುವ ಇಂದಿನ ಕಾಲದಲ್ಲಿ ಪಂಜಾಗಳನ್ನು ಮಠದ ಗವಿಯಲ್ಲಿಟ್ಟು, ಗದುಗೆಯ ಮೇಲೆ ಬೈಬಲ ಇಟ್ಟು ಪೂಜೆ ಮಾಡುವ ನಾಡಿನ ಹಿಂದೂ ಮುಸ್ಲಿಂ, ಕ್ರೈಸ್ತರಲ್ಲಿ ಸಾಮರಸ್ಯ ಮೂಡಿಸುತ್ತಿರುವ ಏಕೈಕ ಮಠ. ಮಠದಲ್ಲಿ ಬೈಬಲಗೆ ಮಳೆ ಜಡಿದು ರಂಧ್ರ ಮಾಡಿ, ರಂಧ್ರ ಮುಚ್ಚಿದ ಮೇಲೆ ಮತ್ತೆ ಹುಟ್ಟಿ ಬರುವೆನೆಂದು ಶ್ರೀಗಳು ಹೇಳಿದ್ದು ರಂಧ್ರ ತಾನಾಗಿಯೇ ಮುಚ್ಚಿಕೊಳ್ಳುತ್ತಿರುವುದು ಪವಾಡವೇ ಸರಿ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಿದ್ದಾನಂದ ಭಾರತಿ, ಸಿದ್ದರಾಮ, ಮಲ್ಲೇಶ ಕಟಗಿ ಮಾತನಾಡಿದರು. ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಯಲ್ಲನಗೌಡ ಪಾಟೀಲ, ಬಸವರಾಜ ಢಪಳಾಪುರ , ಚನ್ನಬಸು ಹುರಕಡ್ಲಿ, ಸತ್ಯಪ್ಪ ಹುದ್ದಾರ,ಮಹಾಂತೇಶ ಘಟ್ನಟ್ಟಿ, ಮಹಾಲಿಂಗ ಕರೆಹೊನ್ನ, ಸಿದ್ದರೂಢ ಮುಗಳಖೋಡ,ಸುರೇಶ ಮಡಿವಾಳ,ವಿರೇಶ ನ್ಯಾಮಗೌಡ,ಶಂಕರ ನಿಲಾರಿ, ಉದ್ದಪ್ಪ ನೀಲಾರಿ,ಅಶೋಕ್ ಸುನಧೋಳಿ, ಹಣಮಂತ ಮೇರಾಪಟ್ಟಿ, ಶಂಕರ ನಾಗರಾಳ, ಭೀಮಪ್ಪ ಗಜಾಗೋಳ, ಸಿದ್ದು ದಡುತಿ, ಅಶೋಕ್ ಮಂಟೂರ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಎಸ್ ಕೆ ಗಿಂಡೆ ಗುರುಗಳು ನಿರೂಪಿಸಿ ವಂದಿಸಿದರು.