ನವದೆಹಲಿ, ನ 6: ನಾಗಾ ಶಾಂತಿ ಮಾತುಕತೆ ಕುರಿತು ಕೇಂದ್ರ ಸರ್ಕಾರ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳೊಂದಿಗೆ ಸಮಾಲೋಚನೆ ಆರಂಭಿಸುವ ಸಾಧ್ಯತೆ ಇದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಬುಧವಾರ ಇಲ್ಲವೇ ಗುರುವಾರ ಭೇಟಿ ಮಾಡುವ ಸಾಧ್ಯತೆ ಇದೆ. ಸೋನೊವಾಲ್ ಇತರ ಕೇಂದ್ರ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪೌರತ್ವ (ತಿದ್ದುಪಡಿ) ಮಸೂದೆ ವಿಷಯದ ಕುರಿತು ಈಶಾನ್ಯ ರಾಜ್ಯಗಳಲ್ಲಿ ಹೊಸ ಹೋರಾಟದ ಮಧ್ಯೆ ಸೋನೋವಾಲ್ ರಾಷ್ಟ್ರ ರಾಜಧಾನಿ ಭೇಟಿ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ, ಅಸ್ಸಾಂ ಮೂಲದ ಉಲ್ಫಾ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ಡಿಎಫ್ಬಿ) ಯೊಂದಿಗೆ ಶಾಂತಿ ಮಾತುಕತೆಯ ಪ್ರಗತಿಯ ಬಗ್ಗೆ ಸೋನೊವಾಲ್ ಅವರು ಅಮಿತ್ ಶಾ ಮತ್ತು ಪ್ರಧಾನ ಮಂತ್ರಿಗಳೊಂದಿಗೆ ವಿವರಿಸಲಿದ್ದಾರೆ. ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿನ ನಾಗಾ ಜನವಸತಿ ಪ್ರದೇಶಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಯಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಕೇಂದ್ರ ಗೃಹ ಸಚಿವಾಲಯವ ಭರವಸೆ ನೀಡಿರುವುದರಿಂದ ನಾಗಾ ಶಾಂತಿ ಮಾತುಕತೆಗಳ ಸಭೆ ಮಹತ್ವದ್ದಾಗಿದೆ. 1997 ರಲ್ಲಿ ಎನ್ಎಸ್ಸಿಎನ್ (ಐಎಂ) ನೊಂದಿಗೆ ಆರಂಭವಾದ ಮಾತುಕತೆ ಅಲ್ಲದೆ, ಮೋದಿ ಸರ್ಕಾರ, ನಾಗಾ ನ್ಯಾಷನಲ್ ಪೊಲಿಟಿಕಲ್ ಗ್ರೂಪ್ಸ್ (ಎನ್ಎನ್ಪಿಜಿ) ಒಕ್ಕೂಟದಡಿ ಬರುವ ಎಲ್ಲ ನಾಗಾ ಗುಂಪುಗಳ ಭಾಗವಹಿಸುವಿಕೆಯೊಂದಿಗೆ ಮಾತುಕತೆಗಳಲ್ಲಿ ತೊಡಗಿದೆ. ನಾಗಾ ಶಾಂತಿ ಮಾತುಕತೆಗಳನ್ನು ವಿವಿಧ ಸರ್ಕಾರಗಳಡಿ ನಡೆಸಲಾಗಿತ್ತು. 1997-98ರಲ್ಲಿ ಐ ಕೆ ಗುಜ್ರಾಲ್ ಸರ್ಕಾರದೊಂದಿಗೆ, ನಂತರ 1999 ಮತ್ತು 2004 ರ ನಡುವೆ ಎನ್ಡಿಎ ಅವಧಿಯ ವಾಜಪೇಯಿ ಆಡಳಿತದಲ್ಲಿ, 2004 ಮತ್ತು 2014 ರ ನಡುವೆ ಮನಮೋಹನ್ ಸಿಂಗ್ ಆಡಳಿತದಲ್ಲಿ ಹಾಗೂ 2014-19ರ ನಡುವೆ ಮೋದಿ ಸರ್ಕಾರದ ಆಡಳಿತದಲ್ಲಿ ನಡೆಸಲಾಗಿತ್ತು. ಇದೀಗ ಎರಡನೇ ಅವಧಿಯ ಮೋದಿ ಸರ್ಕಾರದಲ್ಲಿ ನಾಗಾ ಶಾಂತಿ ಮಾತುಕತೆಗಳು ಪುನರಾರಂಭಗೊಳ್ಳುತ್ತಿವೆ.