ದರ್ಶನ ವರದಿ
ಹಳಿಯಾಳ: ಕೆಂಪೇಗೌಡ ಅವರ ದೂರದೃಷ್ಠಿಯ ಪರಿಣಾಮ ಬೆಂಗಳೂರು ಇಂದು ಬೃಹತಾಕಾರದಲ್ಲಿ ಬೆಳೆದು ಗಾರ್ಡನ ಸಿಟಿ, ಸಿಲಿಕಾನ್ ಸಿಟಿ, ಅವಕಾಶಗಳ ನಗರ, ವಿಶ್ವದ ಸುಂದರ ನಗರ ಸೇರಿದಂತೆ ಇನ್ನಿತರ ಹೆಸರುಗಳಿಂದ ಕಂಗೊಳಿಸುತ್ತಿದೆ ಎಂದು ತಹಶೀಲದಾರ ಜಿ.ಕೆ.ರತ್ನಾಕರ ಹೇಳಿದರು.
ಮಿನಿವಿಧಾನಸೌಧದಲ್ಲಿ ಗುರುವಾರ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಪುರಸಭೆಯ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ನಿರ್ಮಾಣ ತೃರಾಗಿರುವ ನಾಡಪ್ರಭು ಕೆಂಪೇಗೌಡ ಅವರು ವಿಶ್ವ ಕಂಡ ಅತ್ಯಂತ ದಕ್ಷ ಹಾಗೂ ದೂರದೃಷ್ಠಿಯನ್ನು ಹೊಂದಿರುವಂತೆ ಆಡಳಿತಗಾರರಾಗಿದ್ದು ಅವರ ಆಡಳಿತ ವೈಖರಿ ಇಂದಿಗೂ ಮಾದರಿಯಾಗಿದೆ ಎಂದರು.
ಕೆಂಪೇಗೌಡ ಅವರು 40 ವರ್ಷಗಳ ಕಾಲ ಸತತವಾಗಿ ಬೆಂಗಳೂರು ಪ್ರಾಂತದಲ್ಲಿ ರಾಜ್ಯಾಭಾರ ನಡೆಸಿ ಸುಮಾರು 400 ವರ್ಷಗಳ ಕಾಲ ನೆನಪು ಉಳಿಯುವಂತಹ ಕಾಮಗಾರಿ ಮಾಡಿದ್ದು, ಅವರ ಕೆಲಸಗಳು ಇಂದಿಗೂ ಮಾದರಿಯಾಗಿದೆ. ಅತ್ಯುತ್ತಮ ಆಡಳಿತಗಾರರಾಗಿದ್ದ ಕೆಂಪೇಗೌಡರು ಅಂದಿನ ಕಾಲದಲ್ಲಿ ಆಡಳಿತದ ಸೂತ್ರಗಳನ್ನು ರೂಪಿಸಿ ಅದರ ಮೂಲಕ ಪ್ರಾಮಾಣಿಕವಾಗಿ ಮುನ್ನಡೆಯುವಂತೆ ಮಾಡಿದ್ದು ಇಂದಿಗೂ ಇತಿಹಾಸ ಪುಟಗಳಿಂದ ತಿಳಿಯಬಹುದಾಗಿದೆ. ಕೆಂಪೇಗೌಡರು ಅಂದಿನ ಕಾಲದಲ್ಲಿಯೇ ಕೆರೆ ಕಟ್ಟೆ, ನೈರ್ಮಲ್ಯಕ್ಕೆ ಪ್ರಾಧ್ಯಾನತೆ, ಕಟ್ಟಡಗಳ ನಿರ್ಮಾಣ , ಗೋಪುರಗಳ ಮೂಲಕ ಗಡಿಗಳನ್ನು ಗುರುತಿಸುವುದ ಸೇರಿದಂತೆ ಇನ್ನಿತರ ಮಹತ್ವ ಕಾರ್ಯಗಳನ್ನು ಮಾಡಿದ್ದು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಇತಿಹಾಸ ಉಪನ್ಯಾಸಕ ಸುರೇಶ ಕಡೇಮನಿ ಅವರು ಕೆಂಪೇಗೌಡ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಿಪಿಐ ಬಿ.ಎಸ್.ಲೋಕಾಪೂರ, ಕರವೇಯ ಬಸವರಾಜ ಬೆಂಡೀಗೇರಿಮಠ, ಪತಂಜಲಿಯ ಕಮಲ್ ಸಿಕ್ವೇರಾ, ಹಿರಿಯ ನಾಗರಿಕರ ವೇದಿಕೆಯ ಡಿ.ಎಮ್.ಸಾವಂತ, ಜೀಜಾಮಾತಾ ಸಂಘದ ಮಂಗಲಾ ಕಶೀಲ್ಕರ, ಎಮ್.ಐ. ಗೋರಿಖಾನ್, ಗುಲಾಬಶ್ಯಾ ಲತೀಫನವರ, ಜಮಾದಾರ, ಪರಶುರಾಮ ಶಿಂಧೆ, ಮಂಜು ಮಾದರ ಮೊದಲಾದವರಿದ್ದರು.