ಎನ್ ಆರ್ ಸಿ ಜಾರಿಗೊಳಿಸುವುದಿಲ್ಲ; ಆಂಧ್ರಪ್ರದೇಶ ಸಿಎಂ ಜಗನ್ ಘೋಷಣೆ

jagamohanreddy

ಕಡಪ, ಡಿ ೨೩- ವಿವಾದದ   ಕೇಂದ್ರಬಿಂದುವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ  (ಎನ್‌ಆರ್‌ಸಿ)  ಜಾರಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ  ಸೋಮವಾರ   ಪ್ರಮುಖ ಹೇಳಿಕೆ ನೀಡಿದ್ದಾರೆ.

ತಮ್ಮ ಸರ್ಕಾರ  ರಾಷ್ಟ್ರೀಯ  ಪೌರತ್ವ  ನೋಂದಣಿ- ಎನ್ ಆರ್ ಸಿಗೆ   ವಿರುದ್ಧವಾಗಿದೆ.  ರಾಜ್ಯದಲ್ಲಿ   ಯಾವುದೇ  ಕಾರಣಕ್ಕೂ  ಅದನ್ನು  ಜಾರಿಗೊಳಿಸುವುದಿಲ್ಲ ಎಂದು  ಮುಖ್ಯಮಂತ್ರಿ  ಘೋಷಿಸಿದ್ದಾರೆ.  ಅಲ್ಪಸಂಖ್ಯಾತರ ಬೆಂಬಲಕ್ಕೆ ತಮ್ಮ ಸರ್ಕಾರ ನಿಲ್ಲಲಿದೆ  ಎಂದು  ಅವರು ಭರವಸೆ ನೀಡಿದ್ದಾರೆ.

 ಸೋಮವಾರ  ತಮ್ಮ ತವರು ಜಿಲ್ಲೆ ಕಡಪಗೆ  ಭೇಟಿ ನೀಡಿದ್ದ  ಮುಖ್ಯಮಂತ್ರಿ  ವೈ.ಎಸ್.   ಜಗನ್ ಮೋಹನ್ ರೆಡ್ಡಿ,    ಈ ಹೇಳಿಕೆ ನೀಡಿದ್ದಾರೆ.  ಎನ್ ಆರ್ ಸಿ  ವಿಧೇಯಕ  ಸಂಬಂಧ  ಉಪ ಮುಖ್ಯಮಂತ್ರಿ  ಅಂಜಾದ್ ಬಾಷಾ  ಈ ಹಿಂದೆ ಸರ್ಕಾರದ  ಪರವಾಗಿ ಹೇಳಿಕೆ ನೀಡಿದ್ದಾರೆ. ಅವರ   ಹೇಳಿಕೆಗೆ  ಸರ್ಕಾರ ಬದ್ಧವಾಗಿದೆ ಎಂದು   ಸ್ಪಷ್ಟಪಡಿಸಿದರು. ತಮ್ಮ ಸರ್ಕಾರ  ಅಲ್ಪ ಸಂಖ್ಯಾತರ ಪರವಾಗಿ ನಿಲ್ಲಲಿದೆ  ಎಂದು ಭರವಸೆ ನೀಡಿದರು.

ವಿವಾದಸ್ಪದ  ಎನ್‌ಆರ್‌ಸಿ  ವಿರುದ್ದ  ದೇಶಾದ್ಯಂತ   ತೀವ್ರ  ರೀತಿಯ  ಆಂದೋಲನ  ವ್ಯಕ್ತವಾಗುತ್ತಿದೆ, ಪ್ರಮುಖವಾಗಿ ಅಲ್ಪಸಂಖ್ಯಾತರು  ದೊಡ್ಡ ಪ್ರಮಾಣದಲ್ಲಿ  ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ   ಅಲ್ಪಸಂಖ್ಯಾತರ ಪರವಾಗಿ ನಿಲ್ಲಲಿದ್ದೇವೆ. ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ  ಭಯ ಪಡುವ ಅಗತ್ಯವಿಲ್ಲ  ಎಂದು  ಉಪ ಮುಖ್ಯಮಂತ್ರಿ ಸೇರಿ ರಾಜ್ಯದ ಹಲವು ಮಂತ್ರಿಗಳು ಭರವಸೆ ನೀಡಿದ್ದಾರೆ.