ಕಾಶ್ಮೀರದಲ್ಲಿ ಅತಿ ದೊಡ್ಡ ರೈಲ್ವೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಕ್ಕೆ ಹೊಸ ಗಡುವು

ನವದೆಹಲಿ, ಜ 10 , ಡಿಸೆಂಬರ್ 2021 ರ ವೇಳೆಗೆ ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ರೈಲು ಮಾರ್ಗದ ಮೂಲಕ ಸಂಪರ್ಕಿಸಲು ಸರ್ಕಾರ ಹೊಸ ಗಡುವು ನೀಡಿದೆ. ವಿಶ್ವದ ಅತಿ ದೊಡ್ಡ ರೈಲ್ವೆ ಸೇತುವೆ ನಿರ್ಮಾಣ ಕಾರ್ಯವನ್ನು ಮುಂದಿನ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದೆ.  ಈ ರೈಲು ಮಾರ್ಗವು ಐಫೆಲ್ ಗೋಪುರಕ್ಕಿಂತಲೂ 35 ಮೀಟರ್ ಎತ್ತರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಇದು ಅತಿ ದೊಡ್ಡ ಸವಾಲಿನ ಕಾರ್ಯವಾಗಿದೆ ಎಂದು ಕೊಂಕಣ ರೈಲ್ವೆ ಹೇಳಿದೆ.  ಈ ಸೇತುವೆಯ ನಿರ್ಮಾಣ ಕಾಶ್ಮೀರ ರೈಲು ಸಂಪರ್ಕ ಯೋಜನೆಯಲ್ಲಿ ಅತ್ಯಂತ ಸವಾಲಿನ ಭಾಗವಾಗಿದೆ ಮತ್ತು ಈ ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಎಂಜಿನಿಯರಿಂಗ್ ನ ಅದ್ಭುತವಾಗಲಿದೆ ಎಂದು ಕೊಂಕಣ ರೈಲ್ವೆಯ ಅಧ್ಯಕ್ಷ ಸಂಜಯ್ ಗುಪ್ತ, ಅಭಿಪ್ರಾಯಪಟ್ಟಿದ್ದಾರೆ. ಈ ಬೃಹತ್ ವಿನ್ಯಾಸಕ್ಕಾಗಿ 5,462 ಟನ್ ಸ್ಟೀಲ್ ಅಗತ್ಯವಿದ್ದು ಇದು ನದಿಯಿಂದ 359 ಮೀಟರ್ ಎತ್ತರದಲ್ಲಿರಲಿದೆ.   ಪ್ರತಿ ಗಂಟೆಗೆ 260 ಕಿಲೋ ಮೀಟರ್ ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳಬಲ್ಲ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುವ ಈ 1.315 ಕಿಲೋ ಮೀಟರ್ ಉದ್ದ ಸೇತುವೆಯು ಕಾಟ್ರಾ ಬಳಿಯ ಬಕ್ಕಲ್ ಹಾಗೂ ಶ್ರೀನಗರ ಬಳಿಯ ಕೌರಿಯನ್ನು ಸಂಪರ್ಕಿಸಲಿದೆ. ಈ ಸೇತುವೆಯು 111 ಕಿಲೋ ಮೀಟರ್ ಉದ್ದದ ಕಾಟ್ರಾ ಮತ್ತು ಬನಿಹಾಲ್ ನಡುವಿನ ಮಾರ್ಗದಲ್ಲಿ ಮಹತ್ವದ ಭಾಗವಾದ ಇದು ಉಧಾಮ್ ಪುರ - ಶ್ರೀನಗರ - ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾಗಿದೆ.