ಕಂಪ್ಲಿ 21: ತಾಲೂಕಿನ ಎಮ್ಮಿಗನೂರು ಗ್ರಾಮದ ನರೇಗಾ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಬಳ್ಳಾರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೇರ ಸೋಮವಾರ ಭೇಟಿ ನೀಡಿ, ಪರೀಶೀಲಿಸುವ ಜತೆಗೆ ಕುಡಿಯುವ ನೀರು, ರಕ್ಷಣಾ ಕವನ ಸೇರಿದಂತೆ ನಾನಾ ಸೌಲಭ್ಯಗಳನ್ನು ಕೂಲಿ ಕಾರ್ಮಿಕರಿಗೆ ಕಲ್ಪಿಸುವಂತೆ ತಿಳಿಸಿದರು.
ನಂತರ ಸಿಇಒ ಮೊಹಮ್ಮದ್ ಹ್ಯಾಸಿಸ್ ಮಾತನಾಡಿ, ದೂರದ ನಗರಗಳತ್ತ ಉದ್ಯೋಗ ಅರಸಿ ಹೋಗುವುದನ್ನು ತಡೆಯಲು ನರೇಗಾ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೂಲಿಕಾರಿಗೆ 100 ದಿನಗಳು ಕೆಲಸ ಮಾಡಿ, ತಮ್ಮ ತಮ್ಮ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಬೇಕು. ಮತ್ತು ಜನರು ಬೇರೆ ಊರುಗಳಿಗೆ ಗುಳೆ ಹೋಗದೇ ತಮ್ಮ ತಮ್ಮ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ಗುಳೆ ತಡೆಯುವ ನಿಟ್ಟಿನಲ್ಲಿ ನರೇಗಾ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯ ಸದುಪಯೋಗ ಕೂಲಿ ಕಾರ್ಮಿಕರು ಪಡೆಯಬೇಕು. ಕೂಲಿ ಕೆಲಸಕ್ಕೆ ಬರುವವರಿಗೆ ಮಾತ್ರ ಹಾಜರಾತಿ ನೀಡಬೇಕು. ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ, ಮತ್ತು ವಿಶೇಷ ಚೇತನರಿಗೆ ಅರ್ಧದಷ್ಟು ಕೆಲಸ ಕಲ್ಪಿಸಿ. ಮನರೇಗಾ ಯೋಜನೆಯಡಿ ಕನಿಷ್ಠ 60ಅ ಮಹಿಳೆಯರು ಭಾಗವಹಿಸಲು ಸೂಕ್ತಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ.ಶ್ರೀಕುಮಾರ್, ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಪಿಡಿಒ ತಾರನಾಯ್ಕ, ಟಿಸಿ ಸಂಗಮೇಶ, ಟಿಎಇ ತಿಪ್ಪೇಶ್, ಬಿಎಫ್‌ಟಿ ಚನ್ನವೀರ, ಜಿಕೆಎಂ ಶಿಲ್ಪಾ, ಸಂಯೋಜಕ ಹನುಮೇಶ್ ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಇದ್ದರು.