ಕಲಬುರಗಿ, ಫೆ.7, ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮಾಧಾರಿತವಾಗಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸುವುದಾಗಿ ಕಿರುತೆರೆ ಸಿನಿಮಾಗಳ ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ.ಗುಲಬರ್ಗಾ ವಿಶ್ವವಿದ್ಯಾಲದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಕವಿಗೋಷ್ಠಿಯಲ್ಲಿ "ಕಿರುತೆರೆ –ಸಾಮಾಜಿಕ ಜವಾಬ್ದಾರಿಗಳು" ವಿಷಯ ಮಂಡಿಸುವುದಕ್ಕಿಂತ ಮುನ್ನ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಇತ್ತೀಚೆಗೆ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಾಂಬ್ ಹಾಕುತ್ತೇವೆಂದು ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಬಾಂಬ್ಹಾ ಕುತ್ತೇವೆ ಎಂದವರೇ ನಿಜವಾದ ಭಯೋತ್ಪಾದಕರು. ಅಂತವರನ್ನು ಬಂಧಿಸುವ ಮೂಲಕ ಕನ್ನಡಿಗರ ಜೀವವನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಒಂದು ಸ್ವಾಯತ್ತ ಸಂಸ್ಥೆ. ಇಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳನ್ನು ವಿರೋಧಿಸುವುದು ಸರಿಯಾದ ಕ್ರಮವಲ್ಲ. ಆದರೆ, ಸಚಿವ ಸಿ.ಟಿ.ರವಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿರೋಧಿಸಿದರು. ಅಲ್ಲದೇ, ಅನುದಾನವನ್ನು ತಡೆದಿರುವುದು ಪ್ರಜಾಪ್ರಭುತ್ವದ ವಿರೋಧಿ ಲಕ್ಷಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ನಂತರ ಚಲನಚಿತ್ರ: ಕನ್ನಡ ಸಾಹಿತ್ಯ ಕುರಿತು ಮಾತನಾಡಿದ ಅವರು, ಇವತ್ತಿನ ಟಿವಿ ವಾಹಿನಿಗಳು ಕೂಗುಮಾರಿಗಳಾಗಿದ್ದು, ಧಾರಾವಾಹಿಗಳ ಮೂಲಕ ಜನತೆಯನ್ನು ಮನೆಯಲ್ಲಿಯೇ ಕಟ್ಟಿಹಾಕುವಂತಹ ಷಡ್ಯಂತ್ರದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಕಿರುತೆರೆ ಜನತೆಯ ಚಿಂತನೆಯನ್ನು ನಕರಾತ್ಮಕವಾಗಿ ರೂಪಿಸುವುದರಲ್ಲಿ ಧಾರಾವಾಹಿಗಳ ಪಾತ್ರ ದೊಡ್ಡದಿದೆ. ಈ ಬಗ್ಗೆ ಜನತೆಗೆ ತಿಳುವಳಿಕೆ ನೀಡುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಟಿವಿ ವಾಹಿನಿಗಳಲ್ಲಿ ರೂಪುಗೊಳ್ಳುತ್ತಿರುವ ಕಾರ್ಯಕ್ರಮಗಳು ಜಾಹೀರಾತಿನ ಭಾಗವಾಗಿಯೇ ಹೊರತು ಜನತೆಗೆ ಒಳ್ಳೆಯ ವಿಷಯಗಳನ್ನು ತಿಳಿಸುವ, ಜನಕ್ಕೆ ಹಿತವಾಗಿ ಮನರಂಜನೆ ನೀಡುವ ಉದ್ದೇಶವಿಲ್ಲ. ಹೀಗಾಗಿಯೆ ಸಿನೆಮಾ ಕ್ಷೇತ್ರವು ವಾರ್ಷಿಕ 400 ಕೋಟಿ ರೂ. ವಹಿವಾಟು ನಡೆಸಿದರೆ, ಕಿರುತೆರೆಗಳು 1800 ಕೋಟಿ ರೂ. ವ್ಯವಹಾರ ನಡೆಸುತ್ತವೆ ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಮುಂದಿರುವ ಸವಾಲುಗಳು ಕುರಿತು ಮಾತನಾಡಿ, ಪರಭಾಷಾ ಚಿತ್ರಗಳಿಗೆ 400-600 ಶೋ ನಡೆಸುವ ತನಕ ಅವಕಾಶ ನೀಡಲಾಗುತ್ತದೆ. ಅದೇ ಕನ್ನಡ ಚಲನಚಿತ್ರಗಳು 100 ದಿನ ಪೊರೈಸಿ ಯಶಸ್ವಿ ಪ್ರದರ್ಶನ ನಿಡುತ್ತಿದ್ದರೂ ಚಿತ್ರವನ್ನು ಥಿಯೇಟರ್‌ನಿಂದ ಕಿತ್ತು ಹಾಕಲಾಗುತ್ತದೆ. ಪರಭಾಷಾ ಜನರೇ ಬದುಕುತ್ತಿದ್ದಾರೆ ಹೊರೆತು, ಕನ್ನಡದವರು ಜೀವನ ಸಾಗಿಸುತ್ತಿಲ್ಲ. ಸುಮಾರು 45 ವರ್ಷಳಿಂದ ಫಿಲ್ಮ್ ಸಿಟಿಯನ್ನು ಹೆಸರಘಟ್ಟ, ರಾಮನಗರ ಸೇರಿದಂತೆ ಸ್ಥಳಗಳ ಹೆಸರು ಹೇಳಲಾಗುತ್ತಿದೆ. ಚಿತ್ರ ನಗರ ಮಾಡುವಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ಚಿತ್ರಗಳನ್ನು ನಿರ್ಮಿಸಲು ಸಬ್ಸಿಡಿ ನೀಡಲಾಗುತ್ತಿದೆ. ಮೊಬೈಲ್‌ನಲ್ಲಿಯೇ ಚಿತ್ರೀಕರಣ ಮಾಡಿ ಕೆಲವು ಜನ ಸಬ್ಸಿಡಿ ಪಡೆದುಕೊಳ್ಳುತ್ತಿದ್ದಾರೆ. ಹಿಂದುಳಿದ ಪ್ರದೇಶವಾದ ಕಲಬುರಗಿ ಜಿಲ್ಲೆಯಲ್ಲಿ ಯಾರಾದರೂ ಚಿತ್ರ ಮಾಡುತ್ತಿದ್ದರೆ ಅಂತಹ ಪ್ರತಿಭೆಗಳಿಗೆ 10 ಲಕ್ಷ ಬದಲು 50 ಲಕ್ಷ ರೂ, ನೀಡಬೇಕು ಎಂದು ಅವರು ಆಗ್ರಹಿಸಿದರು.