ಢಾಕಾ, ಫೆ 25,ಬಾಂಗ್ಲಾದೇಶದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಹಿರಿಯ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಮುಷ್ಫಿಕರ್ ರಹೀಮ್ ಭಾಜನರಾಗಿದ್ದಾರೆ. ಇಲ್ಲಿನ ಶೆರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನ ಮುಷ್ಫಿಕರ್ ಈ ದಾಖಲೆ ಮಾಡಿದರು. 32ರ ಪ್ರಾಯದ ಬ್ಯಾಟ್ಸ್ಮನ್ ಸೋಮವಾರ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸಿದ್ದರು. ಇದೀಗ ಅವರು 70 ಟೆಸ್ಟ್ ಪಂದ್ಯಗಳಿಂದ ಒಟ್ಟು 4,413 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಶತಕಗಳು ಹಾಗೂ 21 ಅರ್ಧಶತಕಗಳು ಒಳಗೊಂಡಿವೆ.
ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಅವರು 60 ಟೆಸ್ಟ್ ಪಂದ್ಯಗಳಿಂದ 4,405 ರನ್ ದಾಖಲಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಅವರು 56 ಪಂದ್ಯಗಳಿಂದ 3,386 ರನ್ ಗಳಿಸಿ ನಂತರದ ಸ್ಥಾನ ಅಲಂಕರಿಸಿದ್ದಾರೆ. ಹಬಿಬುಲ್ಲಾ ಬಷಾರ್ 3026 ರನ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.ಮೂರನೇ ದಿನದ ಮುಕ್ತಾಯದ ಬಳಿಕ ಮಾತನಾಡಿದ್ದ ಮುಷ್ಫಿಕರ್ ರಹೀಮ್, "ಬ್ಯಾಟ್ಸ್ಮನ್ ಆಗಿ ಆಡುವುದು ತುಂಬಾ ಒತ್ತಡ ಇದ್ದೇ ಇರುತ್ತದೆ. ಈ ಬಗ್ಗೆ ನಿರ್ಧಾರ ಕಠಿಣವಾಗಿರುತ್ತದೆ. ನಾನು ಅಂದು ತೆಗೆದುಕೊಂಡ ಬ್ಯಾಟಿಂಗ್ ನಿರ್ಧಾರ ನನ್ನ ಭವಿಷ್ಯಕ್ಕೆ ತುಂಬಾ ಸಹಾಯವಾಯಿತು," ಎಂದು ಹೇಳಿದರು.ಬಾಂಗ್ಲಾದೇಶ ಆಟಗಾರ 216 ಏಕದಿನ ಹಾಗೂ 84 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಕ್ರಮವಾಗಿ 6,100 ಮತ್ತು 1,265 ರನ್ ದಾಖಲಿಸಿದ್ದಾರೆ.