ಹಣಕೋಣ ಉದ್ಯಮಿ ಹತ್ಯೆ :ಆರೋಪಿಗಳನ್ನು ಕಾರವಾರ ಜೆಎಂಎಫ್ ಗೆ ಹಾಜರು

ಕಾರವಾರ,27 : ತಾಲೂಕಿನ ಹಣಕೋಣ ನಿವಾಸಿ, ಪುಣೆಯ ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಆರೋಪಿಗಳಾದ ಲಕ್ಷ ಜೋತಿನಾಥ್ , ಅಜ್ಮಲ್ ಹಾಗೂ ಮಾಸೂಮ್ ಎಂಬುವವರನ್ನು ಕಾರವಾರ ಜೆಎಂಎಫ್ ಸಿ ನ್ಯಾಯಾಧೀಶರ ಎದುರು ಗುರುವಾರ ಹಾಜರುಪಡಿಸಲಾಯಿತು.  

ನ್ಯಾಯಾಧೀಶರು ಮೂವರು ಆರೋಪಿಗಳನ್ನು ಪ್ರಕರಣದ ವಿಚಾರಣೆ ಹಾಗೂ ಮಹಜರು ಸಲುವಾಗಿ ಪೊಲೀಸ್ ಕಸ್ಟಡಿಗೆ ನೀಡಿದರು.ದೆಹಲಿಯಲ್ಲಿ ಸಿಕ್ಕ ಅಜ್ಮಲ್‌ ಮತ್ತು ಮಾಸೂಮ್ ಅವರನ್ನು ಕಾರವಾರ ಎಎಸ್ಪಿ ಜಯಕುಮಾರ್ , ಜಗದೀಶ್, ತಾಂತ್ರಿಕ ಎಕ್ಸಪರ್ಟ ಸಾತೇನಹಳ್ಳಿ, ಕಾರವಾರ, ಕದ್ರಾ ಸಿಪಿಐ ಹೂಗಾರ ದೆಹಲಿಯಿಂದ ಬಂಧಿಸಿ ಬುಧುವಾರ ಕರೆ ತಂದಿದ್ದರು. ಲಕ್ಷ ಜೋತಿನಾಥ್ ನನ್ನು ಮಡಗಾಂವ್ ನಲ್ಲಿ ವಶಕ್ಕೆ ಪಡೆಯಲಾಗಿತ್ತು. ಲಕ್ಷ ಜೋತಿನಾಥ್ , ಗುರುಪ್ರಸಾದ್ ರಾಣೆಯ ಡಿಸ್ಟಲರಿಯಲ್ಲಿ ಮ್ಯಾನೇಜರ್ ಆಗಿ ಕಳೆದ ಹದಿನೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು .  

ಈಚೆಗ ಮೂರು ತಿಂಗಳ ಹಿಂದೆಯಷ್ಟೇ ಬಿಹಾರ್ ಮೂಲದ ಅಜ್ಮಲ್ ಮತ್ತು ಮಾಸೂಮ್ ಗುರುಪ್ರಸಾದ್ ರಾಣೆ ಡಿಸ್ಟಲರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇವರು ಗೋವಾದಲ್ಲಿ ಕೆಲಸ ಹುಡುಕಿಕೊಂಡು ಆರು ತಿಂಗಳ ಹಿಂದೆಯಷ್ಟೇ ಬಂದಿದ್ದರು. ಜ್ಯೋತಿನಾಥ, ಅಜ್ಮಲ್ , ಮಾಸೂಮ್ ಅವರ ಮೂಲ ರಾಜ್ಯದಲ್ಲಿ ಯಾವುದೇ ಅಪಾರಾಧ ಕೃತ್ಯ ಎಸಗಿದ ಬಗ್ಗೆ ದೂರುಗಳಿಲ್ಲ. ಉದ್ಯಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಮೂವರು ಮಾಡಿದ ಮೊದಲ ಅಪರಾಧ ಕೃತ್ಯ ಇದಾಗಿದ್ದು, ತಮಗೆ ನೌಕರಿ ಮೂಲಕ ಆಶ್ರಯ ನೀಡಿದ್ದ ಮಾಲಕನಿಗಾಗಿ ಈ ಅಪರಾಧ ಕೃತ್ಯ ಎಸಗಿದ್ದಾರೆಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬರುತ್ತಿದೆ. ಕೌಟುಂಬಿಕ ಕಾರಣಗಳಿಗೆ ನಡೆದ ಕೊಲೆಯ ಸಂಬಂಧಗಳನ್ನು ಮುಂದಿನ ತನಿಖೆಯಲ್ಲಿ ತಿಳಿಯಬೇಕಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶ ಪಡಿಸಿಕೊಳ್ಳಬೇಕಿದೆ ಎಂದು ಎಸ್ಪಿ ನಾರಾಯಣ ಹೇಳಿದ್ದಾರೆ. 

 ಹಣಕೋಣ ನಿವಾಸಿ, ಪೂನಾದಲ್ಲಿ ಉದ್ಯಮ ಹೊಂದಿದ್ದ ವಿನಾಯಕ ನಾಯ್ಕ ಪೂನಾದಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇರಲಿಲ್ಲ. ಮುಂಬಯಿ ಭೂಗತ ಪಾತಕಿಗಳಿಂದ ಸಹ ಬೆದರಿಕೆ ಇರಲಿಲ್ಲ ಎಂದು ತನಿಖೆಯಿಂದ ಧೃಡಪಟ್ಟಿದೆ ಎಂದು ಎಸ್ಪಿ ಹೇಳಿದರು. 

 ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣವನ್ನು ಮೂರೇ ದಿನಗಳಲ್ಲಿ ಬೇಧಿಸಿ, ಆರೋಪಿಗಳನ್ನು ಹಿಡಿದು ತಂದಿದ್ದಕ್ಕೆ ರಾಜ್ಯ ಪೊಲೀಸ್ ಮುಖ್ಯಸ್ಥ ಡಿಜಿಪಿ ಅವರು ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದು, ಈ ಪ್ರಕರಣದ ತನಿಖಾ ತಂಡ ಹಾಗೂ ದೆಹಲಿ ಪೊಲೀಸರಿಗೆ ಬಹುಮಾನ ಹಂಚಿಕೆಯಾಗಲಿದೆ ಎಂದು ಎಸ್ಪಿ ನಾರಾಯಣ ತಿಳಿಸಿದ್ದಾರೆ.