ಅಧಿಕಾರಿಗಳ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ

ಕಂಪ್ಲಿ 27: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಪಂ.ಸದಸ್ಯರು, ಪ್ರಧಾನಮಂತ್ರಿ ವಸತಿ ಯೋಜನಡಿ ಫಲಾನುಭವಿ ಆಯ್ಕೆ ವಿಚಾರದಲ್ಲಿ, ಅಧಿಕಾರಿಗಳ ಅಸಹಕಾರ ವಿರುದ್ಧ ಗ್ರಾಪಂ.ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ ಘಟನೆ ಶುಕ್ರವಾರ ನಡೆದಿದೆ. ಗ್ರಾಪಂ.ಸದಸ್ಯ ಎ.ಶಂಕ್ರ​‍್ಪ, ಎಸ್‌.ಎಂ.ಜಡೆಯ್ಯಸ್ವಾಮಿ ಮೊದಲಾದವರು ಮಾತನಾಡಿ, 2017-18ರ ಸಮೀಕ್ಷೆಯಂತೆ 57ಫಲಾನುಭವಿಗಳನ್ನು ಗುರುತಿಸಿದ್ದು, ಇದೀಗ ಪಿ.ಎಂ.ಎ.ವೈ ಅಡಿ 41ಮನೆಗಳು ಬಂದಿವೆ. ಗ್ರಾಮಠಾಣದಲ್ಲಿ ಇದ್ದವರಿಗೆ ಮಾತ್ರ ಮನೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  

ಬುಕ್ಕಸಾಗರ ಗ್ರಾಪಂ.ವ್ಯಾಪ್ತಿಯಲ್ಲಿ ಗ್ರಾಮಠಾಣ ಭಾಗ ತೀರಾ ಕಡಿಮೆಯಿದೆ. ಗ್ರಾಪಂ.ವ್ಯಾಪ್ತಿಯ ಗ್ರಾಮಠಾಣ ಸೇರಿ ಎಲ್ಲಡೆ ಗ್ರಾಪಂ.ಯು ಮೂಲಸೌಕರ್ಯ ನೀಡಿದ್ದಲ್ಲದೆ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅನುಮತಿಸಿದೆ. ಮನೆ ತೆರಿಗೆ ವಸೂಲಾತಿಯಾಗುತ್ತಿದೆ. ಮನೆ ನೀಡಲು ಗ್ರಾಮಠಾಣ ಷರತ್ತು ವಿಧಿಸಿದಲ್ಲಿ 41ಗುರಿಯಲ್ಲಿ ಎಂಟತ್ತು ಮನೆ ನೀಡಲು ಕೂಡಾ ಸಾಧ್ಯವಿಲ್ಲ. ಬಡವರ ಅನುಕೂಲಕ್ಕೆ ಬಂದ ಮನೆ ನೀಡಲು ಗ್ರಾಮಠಾಣ ಎನ್ನುವ ಷರತ್ತು ಏಕೆ? ಎಂದು ಪ್ರಶ್ನಿಸಿ, ಗ್ರಾಮಠಾಣ ಎನ್ನುವ ಷರತ್ತು ಸಡಿಲಿಸಿ, ಸಮೀಕ್ಷೆಯಂತೆ ಆಯ್ಕೆಗೊಂಡ 41ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಒತ್ತಾಯಿಸಿದರು.  

ಅನಿರ್ಧಿಷ್ಟಾವಧಿಯ ಧರಣಿಯಲ್ಲಿ ಗ್ರಾಪಂ.ಅಧ್ಯಕ್ಷ ವಿ.ಕೆ.ಹನುಮಂತಪ್ಪ, ಉಪಾಧ್ಯಕ್ಷೆ ರಮಾದೇವಿ, ಸದಸ್ಯರಾದ ಗಾಯತ್ರಿ, ವೆಂಕಟೇಶ ಬಸಾಪೂರ, ದ್ಯಾವಮ್ಮ ವಡ್ರು, ಎಸ್‌.ಎಂ.ಜಡೆಯ್ಯಸ್ವಾಮಿ, ರಮೇಶಕುಮಾರ, ಹನುಮಕ್ಕ, ಲಕ್ಷ್ಮೀ ಹರಿಜನ, ಬಿ.ಶಶಿಧರ, ಶೆಕ್ಷಾವಲಿ, ರೇವಣ್ಣ, ವಾಣಿ, ಎ.ಶಂಕ್ರ​‍್ಪ, ವರಲಕ್ಷ್ಮಿ, ಜಿ.ಮಲ್ಲೇಶ ಇದ್ದರು. ಪಿಡಿಒ ರಾಜೇಶ್ವರಿ ಪ್ರಭುದೇವ ಮಾತನಾಡಿ, ಪಿ.ಎಂ.ಎ.ವೈ ಅಡಿಯಲ್ಲಿ 41ಮನೆ ನೀಡುವ ಗುರಿಯಿದೆ. ಸಮೀಕ್ಷೆ ಪಟ್ಟಿಯಲ್ಲಿನ ಅಧಿಕೃತ ನಿವೇಶನ ಹೊಂದಿದ ಫಲಾನುಭವಿಗಳಿಗೆ ಮಾತ್ರ ಮನೆ ನೀಡಲಾಗುತ್ತದೆ. ಈಗಾಗಲೇ ಅಧಿಕೃತ ನಿವೇಶನ ಹೊಂದಿದ ಬುಕ್ಕಸಾಗರದ 1, ವೆಂಕಟಾಪುರದ 8ಸೇರಿ 9ಫಲಾನುಭವಿಗಳ ಹೆಸರುಗಳನ್ನು ಆನ್‌ಲೈನ್ ಮೂಲಕ ಕಳುಹಿಸಿದೆ ಎಂದು ಸ್ಪಷ್ಟಪಡಿಸಿದರು.