ನವದೆಹಲಿ, ಅ 10: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಗುರುವಾರ ವಾಗ್ದಾಳಿ ನಡೆಸಿದೆ. ದೀದಿ ನಿಮ್ಮ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗ್ಯ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಮುರ್ಷಿದಾಬಾದ್ ನ ಜಿಯಾಗಂಜ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಪ್ರಕಾಶ್ ಪಾಲ್, ಅವರ ಗರ್ಭಣಿ ಪತ್ನಿ ಹಾಗೂ 8 ವರ್ಷದ ಪುತ್ರನನ್ನು ಹತ್ಯೆ ಮಾಡಲಾಗಿದೆ. ಇದಕ್ಕಿಂತ ಹೀನಾಯ ಕೃತ್ಯ ನಡೆಯಬೇಕೆ? ಎಂದು ವಿಜಯ ವರ್ಗಿಯ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ. ಅಪರಿಚಿತ ದುಷ್ಕರ್ಮಿಗಳು ಪ್ರಕಾಶ್ ಪಾಲ್ ಮತ್ತು ಅವರ ಪತ್ನಿ, ಪುತ್ರನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ಈ ಘಟನೆಯ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.