ಮುರ್ಷಿದಾಬಾದ್ ಜಿಲ್ಲೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ: ಪ್ರತಿಭಟನೆಗೆ ಬಿಜೆಪಿ ಕರೆ

 ನವದೆಹಲಿ, ಅ.10:   ಆರ್ಎಸ್ಎಸ್ ಕಾರ್ಯಕರ್ತ, ಅವರ ಪತ್ನಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯನ್ನು ಮುಂದಿಟ್ಟು ಬಿಜೆಪಿ ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದೆ. "ನಿಮ್ಮ ರಾಜ್ಯದಲ್ಲಿ ಏನು ನಡೆಯುತ್ತಿದೆ ದೀದಿ ?" ಎಂದು ಬಿಜೆಪಿ ನಾಯಕರಾದ ಕೈಲಾಶ್ ವಿಜಯವರ್ಗ್ಸ್ ಟ್ವೀಟ್ ಮಾಡಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಪ್ರಕಾಶ್ ಪಾಲ್, ಅವರ ಗರ್ಭಣಿ ಪತ್ನಿ ಮತ್ತು 8 ವರ್ಷ ಪ್ರಾಯದ ಪುತ್ರನನ್ನು ಹತ್ಯೆ ಮಾಡಲಾಗಿದೆ. ಇದಕ್ಕಿಂತ ಕೆಟ್ಟುದ್ದು ಏನಿದೆ..... ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ಸಂತ್ರಸ್ತ ಕುಟುಂಬ ಮುರ್ಷಿದಾಬಾದ್ನ ಜಿಯಾಗಂಜ್ ಪ್ರದೇಶದಲ್ಲಿ ವಾಸವಾಗಿತ್ತು ಎಂದು ಮೂಲಗಳು ತಿಳಿಸಿವೆ. ಕೆಲವು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದು ಇರಿದಿದ್ದರು. ನಂತರ ಆಯುಧವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಗುರುವಾರ ಮುರ್ಷಿದಾಬಾದ್ನಲ್ಲಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಕರೆ ನೀಡಿದೆ.