ಬಹುಭಾಷಾ ಪ್ರವೀಣ ಟಿ ಎನ್ ಶೇಷನ್

ಚೆನ್ನೈ, ನ 11 :      ಚುನಾವಣಾ ಸುಧಾರಣೆಗಳ ಮೂಲಕವೇ ಭಾರತೀಯರ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆನಿಂತ ಟಿ ಎನ್ ಶೇಷನ್, ಬಹುಭಾಷೆಗಳ ಪ್ರವೀಣ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.    ಬೆಂಗಳೂರಿಗೆ ಬಂದ ಸಮಯದಲ್ಲಿ, ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಕನ್ನಡದಲ್ಲೂ ಸಹ ಮಾತನಾಡುತ್ತಿದ್ದುದು ಅವರಿಗೆ ಭಾಷೆಯ ಬಗ್ಗೆ ಇದ್ದ ಕಾಳಜಿಯನ್ನು ತೋರುತ್ತಿತ್ತು. ಅದರಲ್ಲೂ ಬೆಂಗಳೂರಿನ ಎರಡು ಪ್ರಮುಖ ಸಂಜೆ ಪತ್ರಿಕೆಗಳು ಎಷ್ಟು ಗಂಟೆಗೆ ಮುದ್ರಣಕ್ಕೆ ಹೋಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಒಂದು ಸಲ ಬೆಂಗಳೂರಿನಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡುವಾಗ, ಸಂಜೆವಾಣಿ ಮತ್ತು ಈ ಸಂಜೆ ಪತ್ರಿಕೆಯ ಹೆಸರನ್ನು ಹೇಳಿ, ನಿಮ್ಮ ಪತ್ರಿಕೆ ಎರಡು ಗಂಟೆಯೊಳಗೆ ಮುದ್ರಣಗೊಂಡು ಹೊರಗೆ ಬರುತ್ತದೆ. ಆದ್ದರಿಂದ ನಿಮಗೆ ಮೊದಲು ಸುದ್ದಿ ಸಿಗಬೇಕು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.    ಇನ್ನು ಚುನಾವಣಾ ವ್ಯವಸ್ಥೆಯಲ್ಲಿನ ಕೊಳೆಯನ್ನು ತೊಡೆದು ಹಾಕಲು ಅವಿರತವಾಗಿ ಶ್ರಮಿಸಿದ ಶೇಷನ್ ಅವರು, ಎರಡು ಚುನಾವಣೆಗಳಲ್ಲಿ ಸೋತಿದ್ದು ನಿಜಕ್ಕೂ ದುರಂತ ಮತ್ತು ವಿಪರ್ಯಾಸ.     1997 ರ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಕೆ.ಆರ್.ನಾರಾಯಣನ್ ವಿರುದ್ಧ ಸೋಲು ಕಂಡಿದ್ದರು.    ಎರಡು ವರ್ಷಗಳ ಬಳಿಕ ನಡೆದ ಗಾಂಧೀನಗರ ಸಂಸತ್ ಚುನಾವಣೆಯಲ್ಲೂ ಬಿಜೆಪಿಯ ಪರಮೋಚ್ಛ ನಾಯಕ ಅಂದಿನ ಕೇಂದ್ರ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ವಿರುದ್ಧ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.