ನವದೆಹಲಿ, ನ.19 : ಸಾರ್ವಜನಿಕ ವಲಯವನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಿಸುವುದರ ವಿರುದ್ಧ ಡಿಸೆಂಬರ್ ತಿಂಗಳಿಡೀ ಪ್ರತಿಭಟನೆಗಳು, ಚಳುವಳಿಗಳು ಮತ್ತು ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ತಿಳಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ಆರಂಭಗೊಳ್ಳುವ ಚಳವಳಿ 2020ರ ಜನವರಿ 8ರ ಅಖಿಲ ಭಾರತ ಮುಷ್ಕರದೊಂದಿಗೆ ಸಮಾರೋಪಗೊಳ್ಳಲಿದೆ. ನವಂಬರ್ 16 ಮತ್ತು 17ರಂದು ನವದೆಹಲಿಯಲ್ಲಿ ನಡೆದ ಪಾಲಿಟ್ ಬ್ಯುರೊ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಮೋದಿ ಸರಕಾರ ಸಾರ್ವಜನಿಕ ವಲಯದ ಒಂದು ದೊಡ್ಡ ಪ್ರಮಾಣದ ಖಾಸಗೀಕರಣಕ್ಕೆ ಕೈಹಾಕಿದೆ. ಇದು ಭಾರತದ ಸ್ವಾವಲಂಬೀ ಆಧಾರವನ್ನು ಧ್ವಂಸ ಮಾಡುವುದಲ್ಲದೆ, ಈ ಸರಕಾರದ ಕಾರ್ಪೋರೇಟ್ ಬಂಟರಿಗೆ ನೇರವಾಗಿ ಪ್ರಯೋಜನಗಳನ್ನು ಕೂಡ ಕೊಡಿಸುತ್ತದೆ. ಇಂತಹ ಖಾಸಗೀಕರಣ ದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಏರುತ್ತಿರುವ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ, ಭಾರತೀಯ ಸಮಾಜದ ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳು ಮೀಸಲಾತಿಯಿಂದ ಪಡೆದಿರುವ ಅಲ್ಪ-ಸ್ವಲ್ಪ ಪ್ರಯೋಜನವನ್ನೂ ಗಂಭೀರವಾಗಿ ಕ್ಷಯಿಸುತ್ತದೆ ಎಂದು ಪೊಲಿಟ್ ಬ್ಯುರೊಹೇಳಿದೆ ಎಂದು ಅವರು ತಿಳಿಸಿದರು. ಈ ಪಾಲಿಟ್ ಬ್ಯುರೊ ಸಭೆಯಲ್ಲಿ ಅಯೋಧ್ಯಾ ವಿವಾದ, ಶಬರಿಮಲೆ ಪರಾಮರ್ಶಿ ಮತ್ತು ರಫೇಲ್ ವ್ಯವಹಾರ ಕುರಿತ ಸುಪ್ರಿಂ ಕೋರ್ಟ್ ತೀಪುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ, ದೇಶದಲ್ಲಿನ ಆರ್ಥಿಕ ಸಂಕಟ, ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು, ಹೊಸ ಶಿಕ್ಷಣ ಧೋರಣೆ ಮತ್ತು ಬೊಲಿವಿಯಾದಲ್ಲಿ ಬಲಪಂಥೀಯ ಕ್ಷಿಪ್ರಕ್ರಾಂತಿಯ ಬಗ್ಗೆಯೂ ಚರ್ಚಿಸಿದೆ ಎಂದು ತಿಳಿಸಿದರು. ಅಯೋಧ್ಯಾ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಅದನ್ನು ಬಗೆಹರಿಸುವ ಏಕೈಕ ದಾರಿಯೆಂದರೆ ಒಂದು ನ್ಯಾಯಾಲಯದ ತೀರ್ಪುನ ಮೂಲಕ, ಎಂದು ಸಿಪಿಐ(ಎಂ) ಸದಾ ಹೇಳುತ್ತಾ ಬಂದಿದೆ. ಈ ರೀತಿಯಲ್ಲಿ ಮಾತ್ರವೇ ಕಾನೂನಿನ ಆಳ್ವಿಕೆಯಿರುವ ಒಂದು ಜಾತ್ಯತೀತ ಗಣರಾಜ್ಯ ಇಂತಹ ಒಂದು ವಿವಾದವನ್ನು ನಿಭಾಯಿಸಬಹುದು. ಈಗ ತೀರ್ಪನ್ನು ನೀಡಲಾಗಿದೆ. ಆದರೆ ಈ ತೀರ್ಪುನ ಕೆಲವು ಪ್ರಮೇಯಗಳು ಗಂಭೀರ ಪ್ರಶ್ನೆಗಳನ್ನು ಎತ್ತಿವೆ ಎಂದು ಪಾಲಿಟ್ ಬ್ಯುರೊ ಅಭಿಪ್ರಾಯಪಟ್ಟಿದೆ ಎಂದರು.