ಮಕ್ಕಳಿಗೆ ಈಜು ಕಲಿಸುತ್ತಿದ್ದ ತಾಯಿ ನೀರಿನಲ್ಲಿ ಮುಳುಗಿ ಸಾವು

ಬೆಳಗಾವಿ, ಅ 14:    ಮಕ್ಕಳಿಗೆ ಈಜು ಕಲ್ಲಿಸುತ್ತಿದ್ದ ವೇಳೆ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಸಂಭವಿಸಿದೆ.  ಶಿಲ್ಪಾ ಚನ್ನಗೌಡರ ಎಂಬುವವರು ತಮ್ಮ ಮಕ್ಕಳಿಗೆ ಈಜು ಕಲಿಸುತ್ತಿದ್ದರು. ಈ ವೇಳೆ ಮೂರ್ಚೆ ಬಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂರ್ಚೆ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ನೀರಿನಲ್ಲಿದ್ದಾಗಲೇ ಮೂರ್ಚೆ ಬಂದು ಇಹಲೋಕ ತ್ಯಜಿಸಿದ್ದಾರೆ. ತಾಯಿ ಮುಳುಗುವ ವೇಳೆ ಮಕ್ಕಳು ಜೋರಾಗಿ ಕೂಗಾಡಿದ್ದರು. ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಜರು ಮಾಡಿ ತನಿಖೆ ಮುಂದುವರೆಸಿದ್ದಾರೆ.