ಬೆಳಗಾವಿ/ಚಿಕ್ಕಮಗಳೂರು/ಬೆಂಗಳೂರು, ಆ 6 ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದು, ಕರಾವಳಿ, ಮಲೆನಾಡು, ಕೊಡುಗು ಸೇರಿದಂತೆ ಉತ್ತರ ಕರ್ನಾಟಕ ಹಲವು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು ತಾಲೂಕು ಹೊರತುಪಡಿಸಿ, ಉಳಿದ ನಾಲ್ಕು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ, ಆಯಾ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಸಾರ್ವಜನಿಕರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಹಾಸನದಲ್ಲಿ ಮುಂಗಾರು ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ- ಸಕಲೇಶಪುರ ತಾಲೂಕಿನಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ತಾಲ್ಲೂಕಿನ ಶಾಲೆ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ. ಇಂದು ತಾಲೂಕಿನ ಶಾಲೆ ಕಾಲೇಜುಗಳಿಗೆ ತಹಶೀಲ್ದಾರ್ ರಕ್ಷಿತ್ ಕೆ.ಆರ್ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ಹಾಸನದ ಬೇಲೂರು ತಾಲೂಕಿನ ಅರೆಹಳ್ಳಿ, ಚೀಕನಹಳ್ಳಿ ನಾವರ್ೆ ಹೋಬಳಿ, ಆಲೂರು ತಾಲ್ಲೂಕಿನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿಗಳ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೊಡಗಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈ ಭಾಗದ ಮೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯೊಂದಿಗೆ ಮಂಗಳವಾರ ಮತ್ತು ಬುಧವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅವಘಡ ಉಂಟಾಗಿದ್ದು, ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಸತತ ಕಳೆದ ಎಂಟತ್ತು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸೊಮವಾರ ರಾತ್ರಿ 9 ಗಂಟೆಯ ಸುಮಾರಿಗೆ ಕೊಲ್ಹಾಪುರ ಹತ್ತಿರ ನದಿ ನೀರು ಪೂನಾ- ಬೆಂಗಳೂರು ಹೆದ್ದಾರಿ 4ರ ಮೇಲೆ ನೀರು ಹತ್ತಿದೆ. ಇದರಿಂದಾಗಿ ಬೆಂಗಳೂರು, ಬೆಳಗಾವಿ, ಗೋವಾ, ಹುಬ್ಬಳ್ಳಿ ಧಾರವಾಡ ಸೇರಿದಂತೆ ಇನ್ನಿತರ ಪಟ್ಟಣ ಹಾಗೂ ನಗರಗಳಿಂದ ಪೂನಾ, ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಇನ್ನಿತರ ನಗರಗಳಿಗೆ ಸಂಚರಿಸುವ ವಾಹನಗಳನ್ನು ನಿಪ್ಪಾಣಿ ಹಾಗೂ ಗಡಿಭಾಗದಿಂದ ಈಚೇಗೆ ಪೊಲೀಸರು ತಡೆಹಿಡಿಯುವ ಕಾರ್ಯ ಮಾಡುತ್ತಿದ್ದಾರೆ.
ಪುಣೆ ಬೆಂಗಳೂರು ಮಧ್ಯೆದ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಆ.6ರ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತವಾಗಲಿದೆ. ಬೆಳಗಾವಿ ಮಾರ್ಗವಾಗಿ ಪುನಾ ಕಡೆಗೆ ಪ್ರಯಾಣಿಸದಂತೆ ಬೆಳಗಾವಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಕನ್ನಂಗಿಯ ರಮೇಶ್ ಎಂಬ ರೈತ ಮಣ್ಣು ಕುಸಿದು ಸಾವನ್ನಪ್ಪಿದ್ದು, ಶವಾಗಾರಕ್ಕೆ ಇಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಪ್ರಕೃತಿ ವಿಕೋಪ ಪರಿಹಾರದಡಿ 5 ಲಕ್ಷ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಕೊಪ್ಪ ತಾಲೂಕಿನ ಬಂಡೀಗಡಿ ಗ್ರಾಮದಲ್ಲಿ ಬೃಹತ್ ಮರ ರಸ್ತೆಯ ಮೇಲೆ ಉರುಳಿಬಿದ್ದಿದ್ದು, ಮೆಸ್ಕಾಂ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಜೊತೆಯಲ್ಲಿದ್ದ ಮೃತ ರಮೇಶ್ ಮಗನಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು, ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಕುರಿತು ವೈದ್ಯಾಧಿಕಾರಿಯೊಂದಿಗೆ ಮಾಹಿತಿ ಪಡೆದು, "ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ" ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀರ್ಥಹಳ್ಳಿ ಪಟ್ಟಣದ ಮುಖ್ಯ ರಸ್ತೆಯ ಸಹ್ಯಾದ್ರಿ ಸ್ಕೂಲ್, ಕಾಂಪೋಸಿಟ್ ಜೂನಿಯರ್ ಕಾಲೇಜಿನ ಆವರಣದಲ್ಲಿ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೃಂಗೇರಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಭಾರೀ ಮಳೆಗೆ ಮೈದುಂಬಿ ಹರಿಯುತ್ತಿದೆ. ಶಾರದಾಂಭ ದೇವಾಲಯದ ತುಂಗಾ ನದಿಯ ಪಕ್ಕದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಇಲ್ಲಿನ ಗಾಂಧಿ ಮೈದಾನಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ವರ್ಷಧಾರೆ ಆಗುತ್ತಿದ್ದು, ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಶಾಲೆಗೆ ಬಂದರೂ ಸುರಕ್ಷಿತವಾಗಿ ಮರಳಿ ಮನೆಗೆ ಕಳುಹಿಸಲು ಎಸ್ಡಿಎಂಸಿ ಸದ್ಯಸರಿಗೆ ಜಿಲ್ಲಾಧಿಕಾರಿ ದಯಾನಂದ್ ಸೂಚಿಸಿದ್ದಾರೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ. ಮೂರು ದಿನಗಳಿಂದ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿತ್ತು. ಆದರೆ, ಸೋಮವಾರ ರಾತ್ರಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಗ್ರೆ- ಶೃಂಗೇರಿ ಮಧ್ಯದ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾಮುಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾಮುಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.
ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿಯೂ ರಜೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಬಳಿಯ ದೇಗುಲಕ್ಕೆ ನೀರು ನುಗ್ಗಿದ್ದು ಭಕ್ತಾದಿಗಳು ತೊಂದರೆಗೆ ಒಳಾಗಿದ್ದಾರೆ. ಅಡಿಬುಟ್ಟಿ, ಗೋಕಾಕ್ನಲ್ಲಿ ಹಲವು ಗ್ರಾಮಗಳು ಜಲಾವೃತವಾಗಿದ್ದು, ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದೆ. ಗೋಕಾಕ್ನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣಾ ನದಿಗೆ ಮಧ್ಯಾಹ್ನ 4 ಲಕ್ಷ ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ ಇದ್ದು, ಇದರಿಂದ ನದಿ ತೀರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.