ಚಿತ್ತಗಾಂಗ್, ಸೆ 6: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಮೊಹಮ್ಮದ್ ನಬಿ ಅವರು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನ ತಂಡದ ವ್ಯವಸ್ಥಾಪಕ ನಜೀಮ್ ಜಾರ್ ಅಬ್ದುರ್ಹಿಮ್ಜಾಯ್ ಅವರು ಕ್ರಿಕ್ಬಜ್ಗೆ ಸ್ಪಷ್ಟಪಡಿಸಿದ್ದಾರೆ. ಸೀಮಿತ ಓವರ್ಗಳ ಮಾದರಿಯಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸುವ ನಿಟ್ಟಿನಲ್ಲಿ ಮೊಹಮ್ಮದ್ ನಬಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ನಡೆಯುತ್ತಿರುವ ಟೆಸ್ಟ್ ಪಂದ್ಯ ಸೇರಿ ನಬಿ ಒಟ್ಟು ಮೂರು ಪಂದ್ಯಗಳಲ್ಲಿ ಆಡಿದ್ದಾರೆ. ಅಫ್ಘಾನಿಸ್ತಾನ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿಲ್ಲ. ಐಸಿಸಿ ಶ್ರೇಯಾಂಕದ ಅಗ್ರ ಒಂಬತ್ತು ತಂಡಗಳು ಮಾತ್ರ ಚಾಂಪಿಯನ್ ಹೋರಾಟದಲ್ಲಿ ತೊಡಗಿವೆ. ಚಾಂಪಿಯನ್ಶಿಪ್ನಲ್ಲಿ 27 ದ್ವಿಪಕ್ಷೀಯ ಸರಣಿಗಳಲ್ಲಿ ಒಟ್ಟು 71 ಟೆಸ್ಟ್ ಪಂದ್ಯಗಳು ನಡೆಯಲಿವೆ. ಅಫ್ಘಾನಿಸ್ತಾನ ನವೆಂಬರ್ 27 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಡೆಹ್ರಾಡೂನ್ನಲ್ಲಿ ಏಕೈಕ ಟೆಸ್ಟ್ ಪಂದ್ಯವಾಡಲಿದೆ. ಬಲಗೈ ಬ್ಯಾಟ್ಸ್ಮನ್ ಮೊಹಮ್ಮದ್ ನಬಿ ಅವರು ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ವಿಶೇಷವಾಗಿ ಟಿ-20ಯಲ್ಲಿ ಅದ್ಭುತವಾಗಿ ಆಡಲಿದ್ದು, ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘನ್ಗೆ ಉಪಯುಕ್ತ ಆಟಗಾರನಾಗಿದ್ದಾರೆ.