ರೇರಾ ಕಾಯ್ದೆಯಲ್ಲಿ ಮಾರ್ಪಾಡು; ವಿ.ಸೋಮಣ್ಣ

ಬೆಂಗಳೂರು, ಮೇ 30,ರೇರಾ ಪ್ರಾಧಿಕಾರಕ್ಕೆ ಸ್ವಾಯತ್ತತೆ ತರಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಹೊಸ ಮಾರ್ಪಾಡು ತರಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇರಾ ಕಾಯಿದೆ ನಿಯಂತ್ರಣ ತರಲು ರೇರಾ ಪ್ರಾಧಿಕಾರ ರಚನೆ ಆಗಿದೆ. ಖರೀದಿದಾರ ಮತ್ತು ಅಭಿವೃದ್ಧಿದಾರ ಇಬ್ಬರಿಗೂ ಸಂಪರ್ಕ ಸೇತುವೆ ದೃಷ್ಟಿಯಿಂದ ಮೊದಲು ಒಂದು ದರ ನಿಗದಿ ಮಾಡುತ್ತಾರೆ. ಆದರೆ ದಿನ ಕಳೆದಂತೆ  ಮಧ್ಯಮ ವರ್ಗದವರ ಕೈಗೆಟುಕದ ರೀತಿ ದರ ಏರಿಕೆ ಮಾಡಿರುತ್ತಾರೆ. ಇವುಗಳ ನಿಯಂತ್ರಣ ನಮ್ಮ ಗುರಿಯಾಗಿದ್ದು, ರೇರಾ ಕಾಯ್ದೆ ಸದುಪಯೋಗ ಮಾಡಿಕೊಳ್ಳಲು ಹಲವು ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಒಂದು ಸಮಿತಿ ಮಾಡಿದ್ದು, ಹಲವು ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ಹೇಳಿದರು.
ಸೂರ್ಯನಗರ 4 ನೇ ಹಂತದಲ್ಲಿ ಟೌನ್ ಶಿಪ್ ನಿರ್ಮಾಣವಾಗುತ್ತಿದ್ದು, ಇಲ್ಲಿ 30 ಸಾವಿರ ನಿವೇಶನಗಳ ಹಂಚಿಕೆ ಮಾಡಲಾಗುವುದು. ಇಲ್ಲಿನ ಮುತ್ಯಾಲಮಡುವಿನ 100 ಎಕರೆ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡಲಾಗುವುದು. 120 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ ಇದಾಗಿರಲಿದ್ದು, ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ರ ಮಾದರಿಯಲ್ಲಿ ವಿವೇಕಾನಂದರ ಪ್ರತಿಮೆ ನಿರ್ಮಿಸುತ್ತೇನೆ ಎಂದು ಅವರು  ಹೇಳಿದರು.
1.20 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಈ ಕುರಿತು ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಬಡವರಿಗೆ ಉಚಿತ ನಿವೇಶನ ಜೊತೆಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.1.80 ಲಕ್ಷ ಮನೆಗಳನ್ನು ಪಟ್ಟಣ ಪ್ರದೇಶಗಳಲ್ಲಿ ಇಲಾಖೆಯಿಂದ ಕಟ್ಟಲಾಗುತ್ತಿದ್ದು, ಈಗಾಗಲೇ 750 ಕೊಳಚೆ ಪ್ರದೇಶಗಳನ್ನು ಕೊಳಚೆ ರಹಿತ ಪ್ರದೇಶವಾಗಿ ಮಾಡಲಾಗುತ್ತಿದೆ. ಕೊಳಚೆ ಮುಕ್ತ ರಾಜ್ಯ ನಮ್ಮ ಗುರಿಯಾಗಿದ್ದು, ಈ ಸಲ ಬೆಂಗಳೂರಲ್ಲೂ 250 ಸ್ಲಮ್ ಗಳನ್ನು ಕೊಳಚೆ ರಹಿತ ಮಾಡಲಾಗುವುದು. ಕೊಳಚೆ ಪ್ರದೇಶದ ಜನ ಸಾಮಾನ್ಯ ಜನರಂತೆ ಬದುಕುವ ವ್ಯವಸ್ಥೆ ತರಲಾಗುವುದು ಎಂದರು.ರಾಜ್ಯ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಟೀಕಾಪ್ರಹಾರ ನಡೆಸಿದ ಸಚಿವ ಸೋಮಣ್ಣ, ಯತ್ನಾಳ್ ಅವರು ಹಿರಿಯರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಯತ್ನಾಳ್ ಅವರು ಏನೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಬೇಕು. ಸಾಮರಸ್ಯ ಬೆಳೆಸಿಕೊಳ್ಳಬೇಕು. ಸಾರ್ವಜನಿಕವಾಗಿ ಯತ್ನಾಳ್ ಹೇಳಿಕೆಗಳನ್ನು ಕೊಡಬಾರದು. ಯತ್ನಾಳ್ ಅವರು ನೇರ ನಡೆ ನುಡಿಗೆ ಹೆಸರಾದವರು. ಅನುಸರಿಸಿಕೊಂಡು ಹೋಗುವಂತೆ ನಾನೂ ಸಹ ಯತ್ನಾಳ್ ರಿಗೆ ಹೇಳುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ರಾಜ್ಯದ, ಎಲ್ಲ ಸಮುದಾಯಗಳ ನಾಯಕರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಕೇಳಬೇಕಾಗುತ್ತದೆ. ಬಂಡಾಯ ಶಾಸಕರಿಗೆ ಸೋಮಣ್ಣ ಕಿವಿಮಾತು ಹೇಳಿದರು.ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ವಿರುದ್ಧ ಕಿಡಿಕಾರಿದ ಸೋಮಣ್ಣ,  ಎಲ್ಲರಿಗೂ ಕಾನೂನು ಒಂದೇ.ಎಲ್ಲರೂ ಕಾನೂನಿಗೆ ಗೌರವ ಕೊಡಬೇಕು. ಎಲ್ಲರೂ ಕಾನೂನು ಪಾಲಿಸಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ದರು. ಕಾರ್ಪೊರೇಟರ್ ಯಾವ ಲೆಕ್ಕ ಹೇಳಿ ಎಂದು ಹೇಳಿದ ಅವರು,
ಕೋತಿ ತಾನು ಕೆಡ್ತು ಅಂತ ಹೊಲವೆಲ್ಲ ಕೆಡಿಸೋಕೆ ಹೊಗಬಾರದು. ಇನ್ರಾನ್ ಪಾಷಾಗೆ ಇನ್ನೂ ಸಣ್ಣ ವಯಸ್ಸು. ಕಾನೂನಿಗೆ ಇಮ್ರಾನ್ ಪಾಷ ಬೆಲೆ ಕೊಡಲಿ ಎಂದು ಸಲಹೆ ನೀಡಿದರು.ಮೈಸೂರು ಉಸ್ತುವಾರಿಯಿಂದ ಕೊಕ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ  ನಮ್ಮ ನಾಯಕರು. ಯಡಿಯೂರಪ್ಪ ನಿರ್ಧಾರಕ್ಕೆ ನಾನು‌ ಬದ್ಧನಾಗಿದ್ದೇನೆ. ಕೆಲವೊಮ್ಮ  ಇಂತಹದ್ದೆಲ್ಲಾ ಆಗುತ್ತದೆ ಎಂದು ಸ್ವಯಂ ಸಮಾಧಾನ ಮಾಡಿಕೊಂಡರು.