92ನೇ ವಸಂತಕ್ಕೆ ಕಾಲಿರಿಸಿದ ಲಾಲ್ ಕೃಷ್ಣ ಅಡ್ವಾಣಿ, ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ

 ನವದೆಹಲಿ, ನ. 8:    ಬಿಜೆಪಿಯ ಭೀಷ್ಮ ಎಂದೇ ಹೆಸರಾಗಿರುವ, ಹಿರಿಯ ನಾಯಕ,  ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ಇಂದು 92ನೇ  ವಸಂತಕ್ಕೆ ಕಾಲಿರಿಸಿದ್ದಾರೆ. ಅಡ್ವಾಣಿ ಅವರು 1927ರ ನವಂಬರ್ 8ರಂದು ಅವಿಭಜಿತ ಭಾರತ ಭಾಗವಾಗಿದ್ದ ಈಗಿನ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಗೋರೆಗಾಂವ್ ನಲ್ಲಿ ಜನಿಸಿದ್ದರು. ತಮ್ಮ ಪ್ರಮುಖ ಸಿದ್ಧಾಂತಗಳಿಂದ ಎಂದೂ ವಿಮುಖರಾಗದ, ಯಾವುದೇ ರಾಜಿಗೊಳಗಾದ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಜನ್ಮದಿನ ಶುಭಾಶಯ ಕೋರಿದ್ದಾರೆ ಅಡ್ವಾಣಿ ಜೀ ಅವರ ಸಾರ್ವಜನಿಕ ಸೇವೆ,  ಮೌಲ್ಯಗಳೊಂದಿಗೆ ಬೆಸದುಕೊಂಡಿದೆ. ತಮ್ಮ ತತ್ವ ಸಿದ್ಧಾಂತ, ಮೌಲ್ಯಗಳೊಂದಿಗೆ ಅವರೂ ಎಂದೂ ರಾಜೀಮಾಡಿಕೊಂಡವರಲ್ಲ  ಎಂದು ಮೋದಿ ಸರಣಿ ಟ್ವೀಟ್ ಮಾಡಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಸಂರಕ್ಷಣೆಯ ವಿಷಯ ಎದುರಾದಾಗ  ಅವರು ಸದಾ ಮುಂಚೂಣಿಯ ನಾಯಕರಾಗಿರುತ್ತಾರೆ.  ಕೇಂದ್ರ ಸಚಿವರಾಗಿ  ಆವರ ಆಡಳಿತಾತ್ಮಕ ಕೌಶಲ್ಯ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ. ಬಿಜೆಪಿಗೆ ಬಲತುಂಬಿ, ಒಂದು ರೂಪ ನೀಡಲು ಅಡ್ವಾಣಿ ಜೀ ಹಲವು ದಶಕಗಳ ಕಾಲ ಕಠಿಣ ಶ್ರಮ ವಹಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾರತೀಯ ರಾಜಕಾರಣದಲ್ಲಿ  ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದರೆ, ಅದಕ್ಕೆ ಅಡ್ವಾಣಿ ಜೀ ಅವರಂತಹ ನಾಯಕರು, ನಿಸ್ವಾರ್ಥ ಕಾರ್ಯಕರ್ತರು ಕಾರಣ. ನಮ್ಮ ನಾಗರೀಕರ ಸಬಲೀಕರಣದಲ್ಲಿ  ವಿದ್ವಾಂಸ,  ಮುತ್ಸದ್ಧಿ ದೇಶದ  ಅತ್ಯಂತ  ಗೌರವಾನ್ವಿತ ನಾಯಕರ ಪೈಕಿ ಒಬ್ಬರಾಗಿರುವ  ಲಾಲ್ ಕೃಷ್ಣ  ಅಡ್ವಾಣಿ ಜೀ  ಅವರ ಕೊಡುಗೆ ಅಸಾಧಾರಣವಾದದ್ದು ಎಂದು  ಮೋದಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಜನುಮದಿನದಂದು ಗೌರವಾನ್ವಿತ ಅಡ್ವಾಣಿ ಜೀ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸುದೀರ್ಘ, ಆರೋಗ್ಯಕರ ಜೀವನ  ಕರುಣಿಸುವಂತೆ  ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.