ಲಖನೌ, ಡಿ. 25- ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆಯ ಅಂಗವಾಗಿ ವಾಜಪೇಯಿ ಅವರ 25 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಇಲ್ಲಿನ ಲೋಕ ಭವನದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭವಿಷ್ಯದಲ್ಲಿ, ನಮ್ಮನ್ನು ಎರಡು ವಿಷಯಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅಟಲ್ ಜಿ ಹೇಳುತ್ತಿದ್ದರು - ನಾವು ಆನುವಂಶಿಕವಾಗಿ ಪಡೆದ ಸಮಸ್ಯೆಗಳನ್ನು ಹೇಗೆ ಪರಿಹರಿಸಿದ್ದೇವೆ ಮತ್ತು ನಾವು ರಾಷ್ಟ್ರದ ಅಭಿವೃದ್ಧಿ ಎಷ್ಟು ಪ್ರಬಲ ಅಡಿಪಾಯ ನಿರ್ಮಿಸಿದ್ದೇವೆ ಎಂಬುದರ ಮೇಲೆ ಎನುತ್ತಿದ್ದರು. ಇದು ಉತ್ತಮ ಆಡಳಿತವನ್ನು ಒದಗಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು 370 ನೇ ವಿಧಿಯನ್ನು ಸುಲಭವಾಗಿ ರದ್ದುಗೊಳಿಸಿದೆ ಎಂದ ಮೋದಿ, ನಾವು 2014 ರಿಂದ ಸವಾಲುಗಳಿಗೆ ಸವಾಲೊಡ್ಡುತ್ತಿದ್ದೇವೆ ಎಂದರು.
ಸಮಸ್ಯೆಗಳನ್ನು ಸಂಪೂರ್ಣ ಅಥವಾ ಸಮಗ್ರತೆಯಿಂದ ನೋಡುವ ತನಕ ಉತ್ತಮ ಆಡಳಿತ ಸಾಧ್ಯವಿಲ್ಲ ಎಂದ ಮೋದಿ, ವಾಜಪೇಯಿ ಅವರು ಜೀವನವನ್ನು ತುಂಡು ತುಂಡಾಗಿ ನೋಡಬಾರದು, ಸಮಗ್ರವಾಗಿಯೇ ನೋಡಬೇಕು ಎನ್ನುತ್ತಿದ್ದರು ಎಂದು ಪ್ರಧಾನಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಮೋದಿ ಅವರು, ಅಟಲ್ ಬಿಹಾರಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೂ ಪ್ರಧಾನಿ ಅಡಿಪಾಯ ಹಾಕಿದರು.
ಸ್ವಚ್ಛ ಭಾರತ ಯೋಜನೆಯಿಂದ ಯೋಗದವರೆಗೆ, ಉಜ್ವಲದಿಂದ ಫಿಟ್ ಇಂಡಿಯಾ ಚಳವಳಿ, ಪ್ರತಿ ಯೋಜನೆಗಳು ಕೂಡ ಸಮಾಜದ ರೋಗಗಳನ್ನು ತಡೆಗಟ್ಟಲು ಪ್ರಮುಖ ಕೊಡುಗೆ ನೀಡುತ್ತಿವೆ. ಆಯುಷ್ಮಾನ್ ಭಾರತ್ ಯೋಜನೆ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಇದುವರೆಗೆ 70 ಲಕ್ಷ ಜನರಿಗೆ ಇದರ ಲಾಭವಾಗಿದೆ ಎಂದು ಹೇಳಿದರು.