ಮೋದಿ ಭಾರತೀಯ ಆತ್ಮವನ್ನು ವಿಭಜಿಸುತ್ತಿದ್ದಾರೆ; ಶಶಿ ತರೂರ್

ನವದೆಹಲಿ, ಫೆ 4 - ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುವ ಸೋಗಿನಲ್ಲಿ ದೇಶದ 'ಆತ್ಮವನ್ನು ವಿಭಜಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. 

ಅವರು ದೇಶವನ್ನು ಹಿಂದೂ ವರ್ಸಸ್ ಮುಸ್ಲಿಮರೆಂದು ವಿಭಜಿಸುತ್ತಿದ್ದಾರೆ. ಇದು ದೇಶದ್ರೋಹಿಗಳು ವರ್ಸಸ್ ದೇಶಭಕ್ತರು, ಹಿಂದಿ ಭಾಷಿಕರು ವರ್ಸಸ್ ಹಿಂದಿ ಭಾಷಿಕರಲ್ಲದವರು ಎಂದು ವಿಭಜನೆ ಮಾಡಲಾಗುತ್ತಿದೆ. 1947ರಲ್ಲಿ ಭಾರತೀಯ ನೆಲದ ವಿಭಜನೆಯಾಯಿತು. 2020ರಲ್ಲಿ ಭಾರತೀಯರ ಆತ್ಮದ ವಿಭಜನೆಯಾಗುತ್ತಿದೆ ಎಂದು ಶಶಿ ತರೂರ್  ಲೋಕಸಭೆಯಲ್ಲಿ ಮಂಗಳವಾರ ಆರೋಪಿಸಿದರು. 

ಕೇಂದ್ರ ಸರ್ಕಾರ 'ಸಪ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂದು ಕೇವಲ ಬಾಯಿಮಾತಿನ ಸೇವೆ ಒದಗಿಸುತ್ತಿದೆ. ಇಲ್ಲಿ ಸಬ್ ಕಾ ಸಾತ್ ಅಥವಾ ಅಭಿವೃದ್ಧಿ ಅಥವಾ ನಂಬಿಕೆ ಯಾವುದೂ ಇಲ್ಲ ಎಂದಿದ್ದಾರೆ. 

ಈ ಸರ್ಕಾರದಡಿಯಲ್ಲಿ ಕಳೆದ ಕೆಲ ದಿನಗಳಲ್ಲಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು ನಾಶವಾಗುತ್ತಿರುವುದನ್ನು ಕಂಡಿದ್ದಾರೆ. ಈಗ ಸರ್ಕಾರವೇ ಟುಕ್ಡೆ ಟುಕ್ಡೆ ತಂಡವಾಗಿ ಬದಲಾಗಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಯುಎಪಿಎ ಮಸೂದೆ ಜಾರಿಗೊಳಿಸಿರುವುದರಿಂದ ಭಾರತದ ಈಗ ಅಸ್ತಿತ್ವವೇ ಅಪಾಯ ಎದುರಿಸುತ್ತಿದೆ ಎಂದರು. ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ಎಲ್ಲರ ಮುಖವಾಡ ಬಯಲಾಗಲಿದೆ ಎಂದು ಆರೋಪಿಸಿದರು.