ನವದೆಹಲಿ, ಡಿ ೨೩- ಪ್ರಧಾನಿ ನರೇಂದ್ರ ಮೋದಿ, ಏನಾದರೂ ಸಾಧಿಸಬೇಕೆ೦ದು ಒಮ್ಮೆ ಸಂಕಲ್ಪಿಸಿದರೆ ಅದನ್ನು ಸಾಧಿಸಿಯೇ ತೀರುತ್ತಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಕೊಂಡಾಡಿದ್ದಾರೆ.
ಹೇಳಿದ್ದನ್ನು ಮಾಡುವುದರಲ್ಲಿ ಅವರಿಗೆ ಅವರೇ ಸಾಟಿ ಎಂದು ಹೇಳಿದರು. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜಯಂತಿ ಅಂಗವಾಗಿ "ಅಟಲ್ ಭೂಜಲ್ ಯೋಜನೆ" ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ ಸಿಂಗ್, ಕೇಂದ್ರ ಮಂತ್ರಿ ಮಂಡಲದ ಎಲ್ಲ ಸದಸ್ಯರಿಗಿಂತ ತಾವು ಪ್ರಧಾನಿ ಮೋದಿ ಅವರ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಏನಾದರೂ ಮಾಡುತ್ತೇನೆ ಎಂದು ಮೋದಿ ಹೇಳಿದರೆ. ಅದನ್ನು ಅವರು ಮಾಡಿಯೇ ತೀರುತ್ತಾರೆ. ಅದು ಅವರ ವೈಶಿಷ್ಟ್ಯ ಎಂದು ಕೊಂಡಾಡಿದರು.
ದೇಶ ಯಾವ ವಲಯದಲ್ಲಿ ಹಿಂದೆ ಬಿದ್ದಿದೆ ಎಂಬುದನ್ನು ಗುರುತಿಸಿ ಆ ವಲಯ ಅಭಿವೃದ್ದಿ ಪಡಿಸಲು ಆದ್ಯತೆ ನೀಡುತ್ತಾರೆ ಎಂದರು.
ರೋಹ್ತಾಂಗ್ ಸುರಂಗ ಮಾರ್ಗ ನಿರ್ಮಾಣಕ್ಕೆ ಅಟಲ್ ಬಿಹಾರಿ ವಾಜಪೇಯಿ ೧೮ ವರ್ಷಗಳ ಹಿಂದೆ ಗುರುತಿಸಿ ಆದೇಶ ನೀಡಿದ್ದರು. ಆ ಸುರಂಗ ನಿರ್ಮಾಣ ಬಹುತೇಕ ಪೂರ್ಣಗೊಳ್ಳುತ್ತಿದೆ. ಬರುವ ಆಗಸ್ಟ್ ನಿಂದ ಸಂಚಾರ ಆರಂಭವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ಕಾರ್ಯಗಳನ್ನು ಶ್ಲಾಘಿಸಿದ ಅವರು, ಬಿಆರ್‌ಒ ನಿರ್ಮಾಣವನ್ನು ಅಂದಾಜಿಗಿಂತ ಕಡಿಮೆ ಮೊತ್ತದಲ್ಲಿ ಪೂರ್ಣಗೊಳಿಸಿದೆ ಎಂದು ಹೇಳಿದರು. ಸುರಂಗ ನಿರ್ಮಾಣ ರಾಷ್ಟ್ರೀಯ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ಲೇಹ್-ಮನಾಲಿ ನಡುವಿನ ಅಂತರವನ್ನು ೪೬ ಕಿ.ಮೀ.ಗೆ ಇಳಿಸಿದೆ ಎಂದು ಅವರು ಹೇಳಿದರು. ಸುರಂಗಕ್ಕೆ ವಾಜಪೇಯಿ ಎಂದು ಹೆಸರಿಸಲಾಗುವುದು. ಅಟಲ್ ಭೂಜಲ್ ಯೋಜನೆ ಹಾಗೂ ಅಟಲ್ ಸುರಂಗ ನಿರ್ಮಾಣ ದೇಶಕ್ಕೆ ನೀಡುತ್ತಿರುವ ಎರಡು ದೊಡ್ಡ ಕೊಡುಗೆಯಾಗಿದೆ ಎಂದು ರಾಜನಾಥ್ ಹೇಳಿದರು.