ಬ್ರೂನೈಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ: ಅದ್ಧೂರಿ ಸ್ವಾಗತ

ನವದೆಹಲಿ 03: ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಬ್ರೂನೈಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರು ಅದ್ಧೂರಿ ಸ್ವಾಗತ ನೀಡಿದರು.

ಬ್ರೂನೈ ದರುಸ್ಸಲಾಮ್‌ಗೆ ಬಂದಿಳಿದಿದ್ದೇವೆ. ನಮ್ಮ ಎರಡು ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯವನ್ನು ವಿಶೇಷವಾಗಿ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇವೆ. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ, ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ರೂನಿಯಲ್ಲಿರುವ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಸ್ವಾಗತಿಸಿದರು.

ಭಾರತ ಮತ್ತು ಬ್ರೂನಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಸೌಹಾರ್ದ ಸಂಬಂಧವನ್ನು ಹೊಂದಿವೆ. ಎರಡು ದೇಶಗಳು ಸಹಸ್ರಮಾನದ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದಿಂದ ನಂಟು ಹೊಂದಿವೆ. ಸುಮಾರು 14,000 ಭಾರತೀಯರು ಇರುವ ಒಂದು ಸಣ್ಣ ರಾಷ್ಟ್ರವಾಗಿದೆ.

ನಳಂದ ವಿಶ್ವವಿದ್ಯಾನಿಲಯದ ಯೋಜನೆಯಲ್ಲಿ ಬ್ರೂನೈ ಸಹ ಪಾಲುದಾರ ರಾಷ್ಟ್ರವಾಗಿದೆ. 2023-24ರಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ 286.20 ಮಿಲಿಯನ್ ಡಾಲರ್ ಆಗಿತ್ತು. ರಕ್ಷಣಾ ಸಹಕಾರದ ಅನುಷ್ಠಾನಕ್ಕಾಗಿ ಒಂದು ಒಪ್ಪಂದಕ್ಕೆ 2016 ರಲ್ಲಿ ಸಹಿ ಹಾಕಲಾಯಿತು ಮತ್ತು 2021 ರಲ್ಲಿ ಅದನ್ನು ನವೀಕರಿಸಲಾಯಿತು.