ನವದೆಹಲಿ, ನ 5: ಪಕ್ಷದ ಆಂತರಿಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಪ್ರಮುಖ ಸಭೆಗಳಲ್ಲಿ ಮೊಬೈಲ್ ಫೋನ್ ಬಳಕೆ ಮಾಡದಂತೆ ಕಾಂಗ್ರೆಸ್ ಪಕ್ಷ ನಿಷೇಧ ವಿಧಿಸಿದೆ ಎಂದು ವರದಿಯಾಗಿದೆ. ಈ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ತಮ್ಮ ಮೊಬೈಲ್ ಪೋನ್ ಗಳನ್ನು ಕೊಠಡಿಯ ಹೊರಗಿನ ಕೌಂಟರ್ ನಲ್ಲಿ ಇರಿಸಿದರು ಎಂದು ಹೇಳಲಾಗಿದೆ. ಮೊದಲಿಗೆ ಕೆಲವರು ಮೊಬೈಲ್ ಫೋನ್ ಹೊರಗಿಡಲೂ ಹಿಂದೇಟು ಹಾಕಿದರೂ ಸ್ವತಃ ಪ್ರಿಯಾಂಕಾ ವಾದ್ರಾ ತಮ್ಮ ಫೋನ್ ಹೊರಗಿನ ಕೌಂಟರ್ ನಲ್ಲಿ ಇಟ್ಟ ನಂತರ ಉಳಿದರವರೂ ಬೇರೆ ದಾರಿ ಕಾಣದೆ ಅದನ್ನೆ ಅನುಸರಣೆ ಮಾಡಿದರು ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪಕ್ಷದ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದು ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ತಲುಪಿರುವುದನ್ನು ಸ್ಮರಿಸಬಹುದಾಗಿದ್ದು, ಈ ಹಿನ್ನಲೆಯಲ್ಲಿ ಈ ಹೊಸ ಕ್ರಮ ಅನುಸರಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.