ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಒತ್ತಾಯಿಸಿ ಕರೆ ನೀಡಿರುವ ‘ಕರ್ನಾಟಕ ಬಂದ್’ ಗೆ ಮಿಶ್ರ ಪ್ರತಿಕ್ರಿಯೆ

  ಬೆಂಗಳೂರು, ಫೆ13 :    ಕೈಗಾರಿಕೆಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಯಲ್ಲಿ ಸ್ಥಳೀಯರಿಗೆ (ಕನ್ನಡಿಗರು) ಉದ್ಯೋಗ ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಲಾಗಿರುವ  'ಕರ್ನಾಟಕ ಬಂದ್' ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಕರ್ನಾಟಕ ರಕ್ಷಣಾ ವೇದಿಕೆಯ ಕೆಲ ಬಣಗಳು ಒಳಗೊಂಡಿರುವ ‘ಕರ್ನಾಟಕ ಸಂಘಟನೆಗಳ ವೇದಿಕೆ’ ಯಿಂದ  ಬಂದ್ ಕರೆ ನೀಡಲಾಗಿತ್ತು. ಬಂದ್ ಅನ್ನು ಓಲಾ-ಉಬರ್ ಕ್ಯಾಬ್ ಚಾಲಕರ ಸಂಘ, ಕೆಲ ಆಟೋ ಚಾಲಕರ ಸಂಘಗಗಳು, ರೈತ ಸಂಘಗಳು, ರಸ್ತೆ ಮಾರಾಟಗಾರರ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ಸಾರಿಗೆ ಸಂಘಗಳು ಬೆಂಬಲಿಸಿವೆ.  

  ಈ ಮಧ್ಯೆ, ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಸಹ ಬಂದ್ ಗೆ ಬೆಂಬಲ ನೀಡಿದ್ದರಿಂದ ವಿಮಾನ ಪ್ರಯಾಣಿಕರು ತೊಂದರೆ ಎದುರಿಸಿದರು. ಆದರೂ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಿಎಂಟಿಸಿ ಬಸ್ ಸೇವೆ ಲಭ್ಯವಿದ್ದ ಕಾರಣ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದರು.  

  ಶಾಲಾ-ಕಾಲೇಜುಗಳು ಎಂದಿನಂತೆ ರಾಜ್ಯದಾದ್ಯಂತ ತೆರೆದಿದ್ದವು. ಕೆಲ ಶಾಲಾ ಮಕ್ಕಳ ವಾಹನಗಳ ಚಾಲಕರು ಸಹ ಬಂದ್ ಗೆ ಬೆಂಬಲ ನೀಡಿದ್ದರಿಂದ ಪೋಷಕರು ಮಕ್ಕಳನ್ನು ಇತರ ವ್ಯವಸ್ಥೆಗಳ ಮೂಲಕ ಶಾಲೆಗೆ ಬಿಡಬೇಕಾಯಿತು.

  ಕನ್ನಡ ರಕ್ಷಣಾ ವೇದಿಕೆ (ಕೆಆರ್‌ವಿ)ಯ ಪ್ರವೀಣ್ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಬರಲು ನಗರ ಪೊಲೀಸರು ಅವಕಾಶ ನೀಡಿಲ್ಲ.

  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಆಗಮಿಸಿದ  ಪ್ರಯಾಣಿಕರು ತಮ್ಮ ನಿಗದಿತ ಸ್ಥಾನವನ್ನು ತಲುಪಲು ಟ್ಯಾಕ್ಸಿ ಅಥವಾ ಇತರ ಸಾರಿಗೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು.  ಆಟೋ ರಿಕ್ಷಾಗಳು, ಕ್ಯಾಬ್‌ಗಳು ರಸ್ತೆಗಿಳಿದಿರಲಿಲ್ಲ. ಸದಾ ಪ್ರಯಾಣಿಕರ ದಟ್ಟಣೆಯಿರುವ ಸಿಟಿ ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿತ್ತು.  ಟೌನ್ ಹಾಲ್‌ ಮುಂದೆ ಪ್ರತಿಭಟನೆ ನಡೆಸಲು ಚಳವಳಿಗಾರರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೆ, ಬಿಎಂಟಿಸಿ ಬಸ್ ಸೇವೆ ಸಾಮಾನ್ಯವಾಗಿತ್ತು. 

 ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ. ಬೆಂಗಳೂರಿನಲ್ಲಿ ಸುಮಾರು 180 ರೌಡಿ ಶೀಟರ್‌ಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

  ಬಂದ್ ಗೆ ಬೆಂಬಲ ನೀಡದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ಗಳ ಚಾಲಕರಿಗೆ ಚಳವಳಿಗಾರರು ಹೂವು ನೀಡುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ.

  ರಾಜ್ಯದ ಶಾಲಾ-ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸಿಲ್ಲ. ಅಲ್ಲಲ್ಲಿ ಚಳವಳಿಗಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.  ನೈಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಿದರು.   

  ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  ತಮ್ಮ ನೇತೃತ್ವದ ಸರ್ಕಾರ, ಕನ್ನಡ ಪರ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಂದು ಗುರುವಾರ ಪ್ರತಿಪಾದಿಸಿದ್ದಾರೆ.

  ಕನ್ನಡಿಗರಿಗೆ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ಒದಗಿಸುವ ಉದ್ದೇಶ ಹೊಂದಿರುವ ಸರೋಜಿನಿ ಮಹಿಶಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಅನೇಕ ಸಂಘ- ಸಂಸ್ಥೆಗಳು ಗುರುವಾರ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿವೆ. ಸಾಮಾನ್ಯ ಜನರಿಗೆ ಅನಾನುಕೂಲ ಮಾಡಬಾರದು ಎಂದು ಚಳವಳಿಗಾರರಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

   ‘ಬಂದ್ ಗೆ ಕರೆ ನೀಡಿರುವವರು ತಮ್ಮೊಂದಿಗೆಮಾತುಕತೆಗೆ ಇಚ್ಛಿಸಿದರೆ ತಾವು ಅವರೊಂದಿಗೆ ಮಾತನಾಡಲು ಯಾವಾಗಲೂ ಸಿದ್ಧ. ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಾವು ಕನ್ನಡ ಪರವಾಗಿದ್ದು, ಕನ್ನಡಿಗರಿಗೆ ಅನುಕೂಲಕರವಾಗಬೇಕೆಂದು ಬಯಸುತ್ತೇವೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕೆಂಬುದನ್ನು ಬಯಸುತ್ತೇವೆ.’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

   ‘ಸರೋಜಿನಿ ಮಹಿಶಿ ವರದಿಯ ಅನುಷ್ಠಾನಕ್ಕೆ ತಮ್ಮ ಸರ್ಕಾರ ಬದ್ಧತೆಯನ್ನು ತೋರಿಸಿದೆ. ನಾವು ಈಗಾಗಲೇ ಸರ್ಕಾರ ಮಟ್ಟದಲ್ಲಿ ವರದಿಯನ್ನು ಜಾರಿಗೆ ತಂದಿದ್ದೇವೆ. ಖಾಸಗಿ ವಲಯದಲ್ಲಿ ನಾವು ಅದನ್ನು ಹಂತ ಹಂತವಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಹಂತ ಹಂತವಾಗಿ ಜಾರಿಗೆ ತರಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ  ಎಂದುಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

  ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಮತ್ತು ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟ ಸಹ ಬಂದ್ ಗೆ ‘ನೈತಿಕ ಬೆಂಬಲ’ ವನ್ನು ನೀಡಿವೆ.

  ಮಂಗಳೂರು ಸಮೀಪದ ಫರಂಗಿಪೇಟೆಯಲ್ಲಿ ತಿರುಪತಿ-ಮಂಗಳೂರು ಬಸ್‌ಗೆ ಗುರುವಾರ ಕೆಲ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ತಿರುಪತಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಧ್ರ ಸಾರಿಗೆ ಬಸ್‌ನಲ್ಲಿ ಮೂವತ್ತು ಜನರಿದ್ದು, ಕಲ್ಲು ತೂರಾಟದಿಂದ ಯಾರೊಬ್ಬರಿಗೂ ಗಾಯಗಳಾಗಿಲ್ಲ. 

  ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಎಂದಿನಂತೆ ಸೇವೆಗೆ ಇಳಿದಿದ್ದರಿಂದ ಮತ್ತು ಆಟೋರಿಕ್ಷಾ ಮತ್ತು  ಟ್ಯಾಕ್ಸಿಗಳು ಸಹ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರಿಂದ ಕರ್ನಾಟಕ ಬಂದ್‌ಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಕಂಡು ಬಂದಿಲ್ಲ. ಒಟ್ಟಾರೆ, ರಾಜ್ಯದಲ್ಲಿ ಜನಜೀವನ ಸಮಾನ್ಯವಾಗಿತ್ತು. ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆ ಮತ್ತು ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

  ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರ 1983 ರಲ್ಲಿ ಸಂಸತ್ ಸದಸ್ಯೆ ಹಾಗೂ ಜನತಾ ಪಕ್ಷದ ಹಿರಿಯ ನಾಯಕಿ ಸರೋಜಿನಿ ಮಹಿಷಿಯನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೋಟಾಗೆ ಸಮಿತಿ ಶಿಫಾರಸು ಮಾಡಿತ್ತು.  ಸಮಿತಿ ಜೂನ್ 1984 ರಲ್ಲಿ ಮಧ್ಯಂತರ ವರದಿಯನ್ನು ಮತ್ತು 1986 ರ ಡಿಸೆಂಬರ್‌ನಲ್ಲಿ 58 ಶಿಫಾರಸುಗಳೊಂದಿಗೆ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈ ಪೈಕಿ, ರಾಜ್ಯ ಸರ್ಕಾರ 45 ಶಿಫಾರಸ್ಸುಗಳನ್ನು ಒಪ್ಪಿಕೊಂಡಿದೆ.

 ಎಲ್ಲ ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಮೀಸಲಾತಿ, ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್ ಸಿ ಮತ್ತು ಡಿ ಉದ್ಯೋಗಗಳಲ್ಲಿ  ಕನ್ನಡಿಗರಿಗೆ ಶೇ 100 ರಷ್ಟು ಕಲ್ಪಿಸಬೇಕೆಂಬ ಶಿಫಾರಸುಗಳು ಪ್ರಮುಖವಾಗಿವೆ.