ಮೈಸೂರು/ಕಲಬುರಗಿ, ಆ 14 ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಾವೇರಿ ಜಲಾನಯನ ಪ್ರದೇಶ ಮತ್ತು ಉತ್ತರ ಕರ್ನಾಟಕದ ಹಲವೆಡೆ ತಾತ್ಕಾಲಿಕವಾಗಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಸಂತ್ರಸ್ತರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಮತ್ತು ಪ್ರಕೃತಿ ವಿಕೋಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 54ಕ್ಕೇರಿದೆ, 15 ಜನ ಕಾಣೆಯಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರ ಕಾಲ ಸತತವಾಗಿ ಸುರಿದ ಮಳೆಯ ನಂತರ ಜಲಾಶಯಗಳು ತುಂಬಿದ್ದು, ಅಪಾಯದ ಮಟ್ಟವನ್ನೂ ಮೀರಿತ್ತು. ಇದರಿಂದ ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ನೀರು ಹರಿಯಬಿಟ್ಟ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.
ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಲ್ಲಿನ ನೀರಿನ ಮಟ್ಟ, ಬುಧವಾರ ಬೆಳಿಗ್ಗೆ 124.10 ಅಡಿ (124.80 ಅಡಿ ಗರಿಷ್ಠ ಮಟ್ಟ) ತಲುಪಿದೆ. ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ನೀರಿನ ಮಟ್ಟವನ್ನು ಕಾಯ್ದುಕೊಂಡು, ಹೆಚ್ಚುವರಿ ನೀರನ್ನು ಹರಿಯಬಿಡುತ್ತಿದ್ದಾರೆ. ಜಲಾಶಯಕ್ಕೆ ಒಳಹರಿವು ನಿನ್ನೆ ಸಂಜೆ 54,496 ಕ್ಯೂಸೆಕ್ಗಳಿಂದ 38,844 ಕ್ಯೂಸೆಕ್ಗಳಿಗೆ ಇಳಿಕೆಯಾಗಿದೆ.
ಕೆಆರ್ಎಸ್ನಿಂದ ಹೊರ ಬಿಡುವ ನೀರು ನಿನ್ನೆ ಸಂಜೆ 43,093 ಕ್ಯೂಸೆಕ್ಗಳಿಂದ 32,278 ಕ್ಯೂಸೆಕ್ಗಳಿಗೆ ಇಳಿಸಲಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಬಿನಿ ಜಲಾಶಯದ ಮಟ್ಟವು 2,282.58 ಅಡಿ (2284 ಅಡಿ ಗರಿಷ್ಠ ಮಟ್ಟ) ಗೆ ತಲುಪಿದ್ದು, ಒಳಹರಿವು ಮತ್ತು ಹೊರ ಹರಿವು ಕ್ರಮವಾಗಿ 30,027 ಕ್ಯೂಸೆಕ್ಸ್ ಮತ್ತು 33,708 ಕ್ಯೂಸೆಕ್ ಆಗಿದೆ.
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಮಟ್ಟ 2,856.73 ಅಡಿ (ಗರಿಷ್ಠ ಮಟ್ಟ 2859 ಅಡಿ) ಆಗಿದ್ದು, 7,077 ಕ್ಯೂಸೆಕ್ಗಳ ಒಳಹರಿವು ಮತ್ತು ಹೊರಹರಿವು 3,200 ಕ್ಯೂಸೆಕ್ಗಳಷ್ಟಿದೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಈಗ 2921.39 ಅಡಿಗಳಷ್ಟು ನೀರಿದೆ. ಇದರ ಗರಿಷ್ಠ ಮಟ್ಟ 2,922 ಅಡಿಗಳಾಗಿದೆ. ಇದರ ಒಳಹರಿವು 12,144 ಕ್ಯೂಸೆಕ್ಸ್ ಮತ್ತು ಹೊರಹರಿವು 7720 ಕ್ಯೂಸೆಕ್ ಆಗಿದೆ.
ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ನಿರಾಶ್ರಿತ ಕೇಂದ್ರಗಳಲ್ಲಿ ಒಂದು ವಾರದಿಂದ ಉಳಿದು ಕೊಂಡಿರುವ ಸಂತ್ರಸ್ತರು ತಮ್ಮ ಗ್ರಾಮಗಳಿಗೆ ತೆರಳಿ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿರುವ ಮನೆ, ಜಮೀನುಗಳನ್ನು ವೀಕ್ಷಿಸುತ್ತಿದ್ದಾರೆ.
ಮೈಸೂರು ಜಿಲ್ಲೆಯ ದೇವಾಲಯದ ಪಟ್ಟಣವಾದ ನಂಜನಗೂಡಿನಲ್ಲಿ ಕೆಲವು ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ ಪ್ರವಾಹದಿಂದ ಭಗ್ನಾವಶೇಷಗೊಂಡ ಹಾಗೂ ಕೊಳಚೆಯಂತಾಗಿರುವ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೆ ಮತ್ತೆ ನಿರಾಶ್ರಿತ ಕೇಂದ್ರಗಳಿಗೆ ಹಿಂದಿರುಗಿದ್ದಾರೆ. ಕಳೆದ ಒಂದು ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ಮನೆಗಳು ಕುಸಿದಿದ್ದು, ನೂರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ.
ಶಾಲೆಗಳು ಮತ್ತು ಕಾಲೇಜುಗಳಿಗೆ ಆಗಸ್ಟ್ 14 ರವರೆಗೆ ರಜೆ ನೀಡಲಾಗಿದೆ. ಶಾಲಾ ಕಟ್ಟಡಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಕೊಡಗು ಜಿಲ್ಲೆಯಾದ್ಯಂತ 45ಕ್ಕೂ ಅಧಿಕ ಪರಿಹಾರ ಕೇಂದ್ರಗಳಲ್ಲಿ 8000 ಜನರು ಆಶ್ರಯ ಪಡೆದಿದ್ದಾರೆ.
ಜಿಲ್ಲಾ ಆಯುಕ್ತರ ನಿರ್ದೇಶನದಂತೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಸಂಗ್ರಹಿಸುತ್ತಿದ್ದಾರೆ. ಜಿಲ್ಲೆಯ 79 ಪ್ರದೇಶಗಳು ಈ ವರ್ಷ ಪ್ರವಾಹ ಪರಿಸ್ಥಿತಿ ಎದುರಿಸಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು 153 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, 336 ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದಾನಿಗಳು ಮತ್ತು ಸಂಸ್ಥೆಗಳು ನೀಡುವ ಪರಿಹಾರ ಸಾಮಗ್ರಿಗಳಲ್ಲಿ ನೇರವಾಗಿ ಪ್ರವಾಹ ಪೀಡಿತರಿಗೆ ಹಸ್ತಾಂತರಿಸಲು ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಆನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸಾಕಷ್ಟು ಪ್ರಮಾಣದ ಪರಿಹಾರ ಸಾಮಗ್ರಿಗಳು ಜಿಲ್ಲೆಯಲ್ಲಿವೆ. ಆದರೂ ಉಡುಪಿ ಮತ್ತು ಮೈಸೂರು ಜಿಲ್ಲೆಗಳಿಂದಲೂ ಅಗತ್ಯ ವಸ್ತುಗಳನ್ನು ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.