ಬೆಂಗಳೂರು,
ಏ.5,ಕೊರೊನಾ ಮಹಾಮಾರಿಯ ದುರಂತದಿಂದ ಹೊರಬರಲು ಲಾಕ್‌ಡೌನ್ ಜಾರಿಯ ವೇಳೆ
ತುರ್ತು ಕಾರ್ಯ ನಿರ್ವಹಣೆಗೆ ವಿತರಿಸಿರುವ ಪಾಸ್ ಗಳನ್ನು ದುರ್ಬಳಕೆ ಮಾಡುತ್ತಿರುವವರ
ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.ಐಷಾರಾಮಿ
ಜೀವನಶೈಲಿಯನ್ನು ಇಂತಹ ಲಾಕ್ ಡೌನ್ ಸಂದರ್ಭಗಳಲ್ಲಿ ಮುಂದುವರಿಸಿಕೊಂಡು ಹೋಗಲು ಸಮಾಜದ
ಕೆಲ ದುಷ್ಟ ವ್ಯಕ್ತಿಗಳು ಹವಣಿಸುತ್ತಿರುವುದು ದುರದೃಷ್ಟವೇ ಸರಿ. ಇಂತಹ ಸಮಾಜಘಾತಕ
ಶಕ್ತಿಗಳ ವಿರುದ್ಧ ಸರ್ಕಾರವು ತೀವ್ರವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಈ
ಪಾಸ್ ನೀಡಿಕೆಯ ಸಂದರ್ಭದಲ್ಲಿ ಅನೇಕ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ತಮ್ಮ
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಿಫಾರಸ್ಸು ಹಾಗೂ ಒತ್ತಡವನ್ನು ಏರಿ ತಮ್ಮ
ಕಡೆಯವರಿಗೆ ಪಾಸ್ ಗಳನ್ನು ವಿತರಿಸಿರುವ ದುಷ್ಪರಿಣಾಮವೇ ನಡೆದಿರುವ ಶರ್ಮಿಳಾ ಮಾಂಡ್ರೆ
ಅವರ ಅಪಘಾತ ಪ್ರಕರಣ. ಇಂತಹ ಮಂದಿಗೆಲ್ಲಾ ರಾಜ್ಯ ಪೊಲೀಸರ ಕ್ಲಿಯರ್ ಪಾಸ್ ಹೇಗೆ
ದೊರಕಿತೆಂದು ತನಿಖೆಗೆ ಒಳಪಡಬೇಕಿದೆ ಎಂದು ಒತ್ತಾಯಿಸಿದೆ.ಈಗಾಗಲೇ ಅನಗತ್ಯವಾಗಿ
ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿದ್ದ 10 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ವಶಕ್ಕೆ
ಪಡೆದಿರುವ ರೀತಿಯಲ್ಲಿಯೇ ಪಾಸ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧವೂ
ಸಹ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಪಾಸ್ ವಿತರಣೆಯ ಸಂದರ್ಭದಲ್ಲಿ ಪ್ರಭಾವಿಗಳ
ಒತ್ತಡವೇ ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಪೊಲೀಸರು ಎಲ್ಲ ಕಡೆ
ಅತ್ಯಂತ ಕಟ್ಟುನಿಟ್ಟಾಗಿ ಇಂತಹ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಾಸ್ ಹೊಂದಿರುವ
ವ್ಯಕ್ತಿಗಳನ್ನು ಗುರುತಿಸಿ ಇವರುಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಬಳಸಿ ಉಗ್ರ ಕ್ರಮ
ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದೆ.