ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ, ಸಿಹಿ ಪದಾರ್ಥಗಳ ಸೇವನೆ ರದ್ದು ಮಾಡಿದ ಮಿಸ್ಬಾ ಉಲ್ ಹಕ್

ಲಾಹೋರ್, ಸೆ 17    ಮಿಜ್ಬಾ ಉಲ್ ಹಕ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಎರಡು ಹುದ್ದೆ ಸ್ವೀಕರಿಸಿದ ಬೆನ್ನಲ್ಲೆ  ತಂಡದ ಆಟಗಾರರ ಫಿಟ್ನೆಸ್ ಗುಣಮಟ್ಟ ಹೆಚ್ಚಿಸಲು ಹೊಸ ಆಹಾರ ಪದ್ದತಿಗೆ ಮೊರೆ ಹೋಗಿದ್ದಾರೆ.    

ತಂಡದಲ್ಲಿ ಹೊಸ ಫಿಟ್ನೆಸ್ ಸಂಸ್ಕೃತಿ ಹುಟ್ಟುಹಾಕಲು ಮಿಸ್ಬಾ ಉಲ್ ಹಕ್ ಅವರು ರಾಷ್ಟ್ರೀಯ ಶಿಬಿರ ಮತ್ತು ದೇಶೀಯ ಟೂರ್ನಿಗಳಲ್ಲಿ ಆಟಗಾರರಿಗೆ ಆಹಾರದಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಬಿರಿಯಾನಿ, ಎಣ್ಣೆ ಮಿಶ್ರಿತ ಕೆಂಪು ಬಣ್ಣದ ಮಾಂಸ ಅಥವಾ ಸಿಹಿ ಪದಾರ್ಥಗಳನ್ನು ಸೇವಿಸಬಾರದೆಂದು ಆದೇಶ ಹೊರಡಿಸಿದ್ದಾರೆಂದು ಪಾಕಿಸ್ತಾನದ ಪತ್ರಕರ್ತ ಸಾಜ್ ಸಾದಿಕ್ ಟ್ವೀಟ್ ಮಾಡಿದ್ದಾರೆ.  

ಇತ್ತೀಚಿಗಷ್ಟೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಿಸ್ಬಾ ಉಲ್ ಹಕ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಹಾಗೂ ವಖಾರ್ ಯೂನಿಸ್ ಅವರನ್ನು ಬೌಲಿಂಗ್ ಕೋಚ್ ಆಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿತ್ತು.  

ಶ್ರೀಲಂಕಾ ವಿರುದ್ಧ ಸೆ. 27 ರಿಂದ ಅ. 9ರವರೆಗೆ ನಡೆಯುವ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಗಳು ಮಿಸ್ಬಾ ಉಲ್ ಹಕ್ ಪಾಲಿಗೆ ಮೊದಲ ಪರೀಕ್ಷೆಯಾಗಿದೆ