ಮಂತ್ರಿಮಂಡಲ ವಿಸ್ತರಣೆ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀರಾಮುಲು

ಬಳ್ಳಾರಿ, ಜ 25 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ಯಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಪರಾಜಿತರಾದ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಯೂ ಚರ್ಚೆ ನಡೆಸಿದ್ದು, ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. 

ತಾವು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಬೇಡಿಕೆಯಾಗಿದ್ದು ಅವರ ಬೇಡಿಕೆಯನ್ನು ತಾವು ಅಲ್ಲಗೆಳೆಯಲು ಹೋಗುವುದಿಲ್ಲ. ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ‌ ಮುಖ್ಯಮಂತ್ರಿ ಯಡಿಯೂರಪ್ಪ  ಮತ್ತು ವರಿಷ್ಠರು ಯಾವ  ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ತಾವೂ ಕೂಡ ಎಲ್ಲರಂತೆ ನಿರೀಕ್ಷೆ ಹೊಂದಿರುವುದಾಗಿ ಮಾರ್ಮಿಕವಾಗಿ ನುಡಿದರು. 

ಬಳ್ಳಾರಿ ವಿಮ್ಸ್ ನಲ್ಲಿ ರೋಗಿಗಳಿಗೆ ವೀಲ್ ಚೇರ್ ನೀಡದಂತಹ ಅಮಾನವೀಯ ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಇಂತಹ ಅಮಾನವೀಯ ಘಟನೆಗಳು ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕಂಡುಬರುತ್ತಿದ್ದವು. ಆದರೆ  ಬಳ್ಳಾರಿಯಲ್ಲಿ ಇಂತಹ ಘಟನೆ ನಡೆದಿರುವುದು ಬೇಸರದ ಸಂಗತಿ. ತಪ್ಪಿತಸ್ಥರ ಯಾರೇ ಇದ್ದರೂ ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಅಮಾನತು‌ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ತಮ್ಮ ಗಮನಕ್ಕೂ ಬಂದಿದೆ. ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದಾಗ ಈ ಸಮಸ್ಯೆಯನ್ನು ಗಮನಿಸಿದ್ದೇನೆ. ಹಾಸಿಗೆ ಕೊರತೆ ಇರುವ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಳ ಮಾಡಲಾಗುವುದು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸುವ ಬೇಡಿಕೆ ಇದ್ದು, ಈ ಬೇಡಿಕೆಯನ್ನು ಆದಷ್ಟು ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದರು.ಜನರಿಗೆ ಸುಲಭವಾಗಿ ಆರೋಗ್ಯ ಹಾಗೂ ಚಿಕಿತ್ಸೆ ಸಿಗಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ.ಡಿ. ಗ್ರೂಪ್ ಗುತ್ತಿಗೆ ನೌಕರರು ಸೇರಿದಂತೆ ಯಾವುದೇ ಗುತ್ತಿಗೆ ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು. ಹಿಂದೆ ತಾವು ಆರೋಗ್ಯ ಸಚಿವನಾಗಿದ್ದಾಗ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆ ಬಳಿಕ ಹುದ್ದೆ ತುಂಬಿಲ್ಲ. ಈ ಬಾರಿ ಮತ್ತೆ ಹೆಲ್ತ್ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿಕೊಳ್ಳಲು ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.