ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಸಚಿವ ಬಿ.ಸಿ.ಪಾಟೀಲ್

ಹಾವೇರಿ, ಮೇ 11, ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಭಾಗದ ವಿವಿಧ  ಸಂಘನೆಯ ಕಾರ್ಮಿಕರಿಗೆ ಅವಶ್ಯಕ ದಿನಸಿ ವಸ್ತುಗಳನ್ನು‌ ವಿತರಿಸಿದರು. ಕ್ಷೌರಿಕರು,ಆಟೋ ಚಾಲಕರು, ಅಶಾ ಕಾರ್ಯಕರ್ತೆಯರು, ಅಗಸರು, ಸಿಂಪಿಗರು,ಕಮ್ಮಾರ, ಬಡಿಗೇರ, ಕೊರಗ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ.ನೀರುಗಂಟಿ, ಅರ್ಚಕ, ಮೇದಾರ, ಮಾಲ್ವಿ ಸೇರಿದಂತೆ ಒಟ್ಟು 5000  ಕಾರ್ಮಿಕರಿಗೆ ದಿನಸಿ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವರು, ಕೊರೊನಾ ಲಾಕ್‌ ಡೌನ್‌ ಸಂಕಷ್ಟದ ಸಮಯದಲ್ಲಿ ಕೆಲವು ಸಮುದಾಯಗಳು ಕೆಲಸ ನಿರ್ವಹಿಸಲಾಗದೇ ತೊಂದರೆಗೊಳಗಾಗಿದ್ದವು. ಸರ್ಕಾರ ಕೊರೊನಾ ನಷ್ಟಕ್ಕಾಗಿ 1610 ಕೋಟಿ.ರೂ.ಮೊತ್ತದ ವಿಶೇಷ ಪ್ಯಾಕೇಜ್  ಘೋಷಿಸಿದೆ. ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ದಿಟ್ಟಕ್ರಮ  ವಹಿಸಿದೆ ಎಂದರು.ಮುಂದಿನ ದಿನಗಳಲ್ಲಿ ಇನ್ನು ಕೆಲವು ವರ್ಗಗಳಿಗೆ ಪರಿಹಾರ ಘೋಷಿಸಲಿದೆ. ರಾಜ್ಯ  ಸರ್ಕಾರ ಎಲ್ಲಾ ವರ್ಗದವರ ಪರವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ರಾಜ್ಯದ ಹಿತವನ್ನು  ಕಾಪಾಡಲು ಬದ್ಧವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿಟ್ಟಿನಲ್ಲಿ ಹಗಲಿರುಳು  ಶ್ರಮಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ನಮ್ಮ ರಾಜ್ಯವೇ ಅತ್ಯಂತ ಕಠಿಣ  ಕ್ರಮ ಜರುಗಿಸಿದ್ದು, ಮುಖ್ಯಮಂತ್ರಿಗಳು ಅದರಲ್ಲಿ ಯಶಸ್ವಿಯಾಗಿರುವುದಕ್ಕೆ  ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್, ರಟ್ಟಿಹಳ್ಳಿ, ಹಿರೇಕೆರೂರು ತಹಶೀಲ್ದಾರರು ಉಪಸ್ಥಿತರಿದ್ದರು.