ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಪಾನ್ ಏಷಿಯಾ ಕಂಪನಿಗೆ 15 ದಿನ ಗಡುವು ನೀಡಿದ ಸಚಿವರು


ಕಾರವಾರ 25: ಉತ್ತರ ಕನ್ನಡ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕಿದ್ದ ಗುತ್ತಿಗೆ ಸಂಸ್ಥೆ ಪಾನ್ ಏಷಿಯಾ ನಿಧಾನಗತಿ ಕಾರ್ಯವೈಖರಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಕಾರವಾರದಲ್ಲಿ ಜಿ.ಪಂ. ಸಭಾಭವನದಲ್ಲಿ ಪ್ರಗತಿ ಪರಿಶೀಲನೆಯ ವೇಳೆ ಶುದ್ಧನೀರಿನ ಘಟಕಗಳು ಎಷ್ಟಿವೆ ಎಂಬ ಪ್ರಶ್ನೆ ಬಂದಾಗ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ದಂಗಾದರು. 

ಪಾನ್ ಏಷಿಯಾ ಕಂಪನಿ 15 ದಿನಗಳಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲು ಮಾಡಿಕೊಂಡ ಎಲ್ಲಾ ಘಟಕಗಳ ಸ್ಥಾಪನೆಗೆ ಕ್ರಿಯಾಶೀಲವಾಗದಿದ್ದರೆ ಕಂಪನಿಗೆ ದಂಡ ಹಾಕೋಣ ಎಂದು ಸಚಿವರು ಹೇಳಿದರು. 

108 ಘಟಕಗಳ ಸ್ಥಾಪನೆ ಎಂದು ದಾಖಲೆ ಹೇಳುತ್ತಿದೆ. ಇದು ಸರಿಯಾಗಿದೆಯೇ ಎಂಬ ಪ್ರಶ್ನೆಗೆ ಉಪ ಕಾರ್ಯದಶರ್ಿ ಆರ್.ಜಿ.ನಾಯಕ ಸ್ಪಷ್ಟ ಉತ್ತರ ನೀಡಲಿಲ್ಲ. 58 ಶುದ್ಧ ನೀರಿನ ಘಟಕಗಳು ಇನ್ಸಸ್ಟಾಲ್ ಆಗಿವೆ ಎಂಬ ಮಾಹಿತಿ ಇಲ್ಲಿದೆ. ಅವುಗಳಾದರೂ ಕಾರ್ಯನಿರ್ವಹಿಸುತ್ತಿವೆಯಾ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಬರಲಿಲ್ಲ. ಆಗ ಜಿಲ್ಲಾಧಿಕಾರಿಗಳೇ ಸಮಾಜಾಯಿಷಿ ನೀಡಲು ಮುಂದಾದರು. 9 ಯುನಿಟ್ ಕೆಲಸ ಪ್ರಾರಂಭ ಎಂದಿದೆ. 

ಆದರೆ ಅವುಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ಜಿ.ಪಂ. ಪಾನ್ ಏಷಿಯಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ನಿರ್ಣಯ ಮಾಡಿದೆ ಎಂದರು. ಇದ್ದಕ್ಕಿದ್ದಂತೆ ಕಪ್ಪು ಪಟ್ಟಿಗೆ ಸೇರಿಸಿದರೆ ಕಂಪನಿಗೆ ಲಾಭವಾಗುತ್ತದೆ. ಈಗಾಗಲೇ ಶುದ್ಧ ನೀರಿನ ಘಟಕದ ಹಣ ಅವರಿಗೆ ಪಾವತಿ ಸಹ ಆಗಿರುತ್ತದೆ. ಹಾಗಾಗಿ ಸೂಕ್ಷ್ಮವಾಗಿ ಇಂಥ ವಿಷಯಗಳನ್ನು ನಿರ್ವಹಿಸಬೇಕೆಂದು ಸಚಿವರು, 15 ದಿನ ಗಡುವು ನೀಡೋಣ. ಅವರು ಜಿಲ್ಲೆಗೆ ಬಂದು 58 ಘಟಕಗಳನ್ನು ಮೊದಲು ಸ್ಥಾಪಿಸಿ, ಘಟಕಗಳಿಂದ ಶುದ್ಧ ನೀರು ಬರುವಂತೆ ಮಾಡಲಿ. 

ನಂತರ ಎಲ್ಲಾ ಘಟಕಗಳನ್ನು ಸ್ಥಾಪನೆಗೆ ಗಂಭೀರ ಪ್ರಯತ್ನ ಮಾಡಲಿ . ಇಲ್ಲದೇ ಹೋದರೆ  ಪಾನ್ ಏಷಿಯಾ ಕಂಪನಿಗೆ ದಂಡ ಹಾಗೂ ಇಎಂಡಿ ಜಪ್ತು ಮಾಡೋಣ. ಜೊತೆಗೆ ಕಪ್ಪು ಪಟ್ಟಿಗೂ ಸಹ ಸೇರಿಸುವ. ನಂತರ ಮರು ಟೆಂಡರ್ ಕರೆದು ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು.