ಆಹಾರ ವಿತರಣೆಗೆ ಕುರಿತು ಅಧಿಕಾರಿಗಳೊಂದಿಗೆ ಸಚಿವ ವಿ.ಸೋಮಣ್ಣ ಸಭೆ

ಬೆಂಗಳೂರು, ಮಾ.28,ಕೊರೋನಾ ವೈರಸ್ ಸೋಂಕು ತಡೆಯಲು ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಬಡವರಿಗೆ ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ವಿತರಿಸುವ ಸಂಬಂಧ ವಸತಿ ಸಚಿವ ವಿ.ಸೋಮಣ್ಣ ಸಭೆ ನಡೆಸಿದರು.ಶನಿವಾರ ಇಲ್ಲಿನ ಗೋವಿಂದರಾಜನಗರ ವ್ಯಾಪ್ತಿಯಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಆರೋಗ್ಯ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಡು ಬಡವರಿಗೆ ಆಹಾರ ಸಾಮಗ್ರಿಗಳನ್ನು ಅವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ತೀರ್ಮಾನಿಸಲಾಗಿದ್ದು, ಅದರಂತೆ 5 ಕೆ.ಜಿ ಅಕ್ಕಿ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಬೇಳೆ, ಅರ್ಧ ಕೆಜಿ ಉಪ್ಪು, ಒಂದು ಕೆಜಿ ಈರುಳ್ಳಿಯನ್ನು ಕ್ಷೇತ್ರದ ಬಡ ಕುಟುಂಬಗಳಿಗೆ ವಿತರಿಸಲು ತೀರ್ಮಾನಿಸಲಾಯಿತು ಎಂದು ಮಾಹಿತಿ ನೀಡಿದರು.
ಪ್ರತಿವಾರ್ಡ್‌ ಹತ್ತು ಸ್ಪಯಂ ಸೇವಕರನ್ನು ನಿಯೋಜಿಸಿ ಅಗತ್ಯ ವಸ್ತುಗಳನ್ನು ಖರೀದಿಸುವವರಿಗೆ ನೆರವಾಗಲು ತೀರ್ಮಾನ ಕೈಗೊಳ್ಳಲಾಗಿದೆ. ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ಸಹಾಯವಾಣಿ ಸಂಖ್ಯೆ 180- 233 80020ಗೆ ಸಂಪರ್ಕಿಸಬಹುದು.   ಈ ಸಹಾಯವಾಣಿಗೆ ಸಂಪರ್ಕ ಮಾಡಿದರೆ ನಾಗರಿಕರಿಗೆ ಅಗತ್ಯ ನೆರವು ಒದಗಿಸಲಾಗುವುದು ಎಂದರು.ಆರೋಗ್ಯ ತಪಾಸಣೆಗೆ ಸರಕಾರಿ, ಬಿಬಿಎಂಪಿ ವೈದ್ಯರ ಜತೆಗೆ ಖಾಸಗಿ ವೈದ್ಯರೂ ಕಾರ್ಯ ನಿರ್ವಹಿಸಲಿದ್ದು, ನಾಗರಿಕರು ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.