ಕನ್ನಡ ನಾಡು ನುಡಿ ಸೇವೆ ಗೈದ ಮಹಾನೀಯರನ್ನು ಸ್ಮರಿಸಿದ ಸಚಿವ ಸಂತೋಷ ಲಾಡ್

69ನೇ ಕರ್ನಾಟಕ ರಾಜ್ಯೋತ್ಸವ 

ಧಾರವಾಡ 01:  ಇಂದು ನವೆಂಬರ್ 1, 69ನೇ ಕರ್ನಾಟಕ ರಾಜ್ಯೋತ್ಸವ. ಈ ಕನ್ನಡ ಹಬ್ಬವನ್ನು ನಾವೆಲ್ಲರೂ ಅತ್ಯಂತ ಸಡಗರ, ಸಂಭ್ರಮದಿಂದ ಧ್ವಜಾರೋಹಣ ಮಾಡುವ ಮೂಲಕ ಆಚರಿಸುತ್ತಿದ್ದೇವೆ. ಇದು ನಮಗೆಲ್ಲರಿಗೂ ಪ್ರಮುಖ ಮತ್ತು ಹೆಮ್ಮೆಯ ಹಬ್ಬವಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.  

ಅವರು ಇಂದು ಬೆಳಿಗ್ಗೆ ನಗರದ ಆರ್‌.ಎನ್‌.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. 

ಕರ್ನಾಟಕ ಏಕೀಕರಣ ದೇಶದ ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಾಮುಖ್ಯತೆ ಪಡೆದಿದೆ. ಇದೇ ಸಂದರ್ಭದಲ್ಲಿ ಭೌಗೋಳಿಕವಾಗಿ 19 ವಿವಿಧ ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಮನಸ್ಸುಗಳನ್ನು ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ 1956 ರಲ್ಲಿ ಒಗ್ಗೂಡಿಸಲಾಯಿತು. ಕನ್ನಡ ಮಾತನಾಡುವ ವಿವಿಧ ಭಾಗಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು ಎಂದರು. 

ಕರ್ನಾಟಕ ಏಕೀಕರಣ ಚಳವಳಿಯನ್ನು ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ. ಈ ಸಂಗತಿ ನಮ್ಮೆಲ್ಲರ ಅಭಿಮಾನದ ಸಂಕೇತವಾಗಿದೆ. ಏಕೀಕರಣ ಚಳವಳಿಯ ಪ್ರಮುಖರಾದ ಆಲೂರ ವೆಂಕಟರಾವ್, ರಾ.ಹ.ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್ಪ, ಅದರಗುಂಚಿ ಶಂಕರಗೌಡ ಪಾಟೀಲ ಮತ್ತು ಇತರರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.   

ಕರ್ನಾಟಕವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಜ್ಯವಾಗಿದೆ. ಕನ್ನಡ ಭಾಷೆಯು ನಮ್ಮ ಪರಂಪರೆ, ಸಾಹಿತ್ಯವನ್ನು ಸಾರಿ ಹೇಳುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಎಲ್ಲಾ ಕಚೇರಿಗಳು, ಅಂಗಡಿಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಇಂದು ರಾಜ್ಯದಾದ್ಯಂತ ಸರ್ಕಾರದಿಂದ ಕನ್ನಡಾಂಬೆಗೆ ನುಡಿ-ನಮನ ಅರ​‍್ಿಸಲಾಗುತ್ತಿದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು. 

ನರೇಂದ್ರ ಗ್ರಾಮದ ರಾಮಚಂದ್ರ ಹನುಮಂತ ದೇಶಪಾಂಡೆಯವರು ಕನ್ನಡದ ಕವಿ ಹಾಗೂ ಇತಿಹಾಸಕಾರರಾಗಿದ್ದರು. ಧಾರವಾಡ ಜಿಲ್ಲೆಯು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಕರ್ನಾಟಕ ಸರ್ಕಾರವು ಡಾ. ದ.ರಾ.ಬೇಂದ್ರೆ, ಡಾ.ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಆಲೂರು ವೆಂಕಟರಾವ್, ಡಿ.ವ್ಹಿ.ಹಾಲಭಾವಿ, ಡಾ. ಗಂಗೂಬಾಯಿ ಹಾನಗಲ್, ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ಸ್ಥಾಪಿಸುವ ಮುಖಾಂತರ ಕನ್ನಡ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ. 

ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು, ಜನಪರ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಯನ್ನು ಇಡೀ ರಾಜ್ಯವು ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 

ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೂ 1.07 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ರೂ.30.54 ಕೋಟಿಗಳ ಮೊತ್ತದ ಸೇವೆಯನ್ನು ಪಡೆದಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ 3,82,189 ಮಹಿಳಾ ಫಲಾನುಭವಿಗಳಿಗೆ ರೂ.820.40 ಕೋಟಿ ಯನ್ನು ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 3,84,630 ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವದರ ಜೊತೆಗೆ ನಗದಾಗಿ ರೂ.256 ಕೋಟಿಗಳನ್ನು ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 4,96,928 ಗೃಹ ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ. ಯುವನಿಧಿ ಯೋಜನೆಯಡಿ 3829 ಫಲಾನುಭವಿಗಳಿಗೆ ರೂ.3.85 ಕೋಟಿಗಳ ನೇರ ನಗದು ಒದಗಿಸಲಾಗಿದೆ ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು. 

ಧಾರವಾಡ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಇಲ್ಲಿಯವರೆಗೆ 0.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮತ್ತು ನಿರಂತರವಾಗಿ ಮಳೆ ಆಗುತ್ತಿರುವುದರಿಂದ  ರೈತರ ಬಿತ್ತನೆಗೆ ತೊಂದರೆಯಾಗಿದ್ದು, ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ ಎಂದು ಸಚಿವರು ತಿಳಿಸಿದರು. 

  

ನಾವು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇವೆ. ಬರೆಯುತ್ತೇವೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇವೆ. ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಶ್ರಮಿಸುತ್ತೇವೆ ಎಂದು ಇದೇ ವೇಳೆ ಪ್ರಮಾಣ ಮಾಡೋಣ ಎಂದು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದರು. 

ಕಾರ್ಯಕ್ರಮದಲ್ಲಿ  ಮಾಜಿ ಸಂಸದ ಪ್ರೊ ಐ.ಜಿ.ಸನದಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ್ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಡಾ ಆಯುಕ್ತ ಡಾ.ಸಂತೋಷ ಬಿರಾದಾರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್‌.ಮುಗನೂರಮಠ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ತಹಶೀಲದಾರರಾದ ಡಿ.ಎಚ್‌.ಹೂಗಾರ, ಕೆ.ಆರ್‌.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಹಿರಿಯ ಅಧಿಕಾರಿ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಮಹನೀಯರ ಪ್ರತಿಮೆಗೆ ಮಾಲಾರೆ​‍್ಣ: ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಕಾರ್ಗಿಲ್ ಸ್ಮಾರಕ, ಡೆಪ್ಯೂಟಿ ಚನ್ನಬಸಪ್ಪ ಪ್ರತಿಮೆ, ಕೆ.ಜಿ.ಕುಂದಣಗಾರ ಪ್ರತಿಮೆಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಾಲಾರೆ​‍್ಣ ಮಾಡಿ, ಗೌರವ ಸಲ್ಲಿಸಿದರು. 

ಜನಜಾಗೃತಿ ಸ್ಥಬ್ಧಚಿತ್ರದ ವಾಹನಕ್ಕೆ ಸಚಿವರಿಂದ ಚಾಲನೆ: ಕಾರ್ಯಕ್ರಮದ ನಂತರ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆಯಿಂದ ಹೆಣ್ಣು ಬ್ರೂಣ ಹತ್ಯೆ ನಿಷೇಧ ಕುರಿತ ಜನಜಾಗೃತಿಗಾಗಿ ರೂಪಿಸಿದ್ದ ಸ್ಥಬ್ಧಚಿತ್ರದ ವಾಹನಕ್ಕೆ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮೀಣ ವಿಭಾಗ ಕನ್ನಡ ಕ್ರೀಯಾ ಸಮಿತಿಯು ರೂಪಿಸಿದ್ದ ನಾಡಮಾತೆ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. 

ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವರ್ಗದ ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಸಾರ್ವಜನಿಕ ಪ್ರಚಾರಕ್ಕಾಗಿ ರೂಪಿಸಿರುವ ಆರು ಆಟೋಗಳಿಗೆ ಸಚಿವರು ಹಸಿರು ಬಾವುಟ ತೋರಿ ಚಾಲನೆ ನೀಡಿದರು. 

ಆಕರ್ಷಕ ಪಥಸಂಚಲನ: ಇಂದು ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಅಧಿಕಾರಿಗಳಾದ ಮಂಜುನಾಥ ಕುರಗೋಡ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ವಾಸು ರಕ್ಷೇದ ಅವರ ನೇತೃತ್ವದಲ್ಲಿ ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಧಾರವಾಡ ಶಹರದ ಪಿಎಸ್‌ಐ ಸ್ವಾತಿ ಮುರಾರಿ ಅವರ ನೇತೃತ್ವದ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರ ತಂಡ, ರಾಚಯ್ಯ ಅಮರ​‍್ಪನಮಠ ಅವರ ನೇತೃತ್ವದ ಜಿಲ್ಲಾ ಗೃಹರಕ್ಷಕ ದಳ, ಪ್ರಭಾಕರ ಟಿ.ಹೊಸಮನಿ ಅವರ ನೇತೃತ್ವದ ಅಗ್ನಿಶಾಮಕ ದಳ, ಡಿ.ಆರ್‌.ಎಫ್‌.ಒ. ಚಂದ್ರಶೇಖರ ರೊಟ್ಟಿ ಅವರ ನೇತೃತ್ವದ ಅರಣ್ಯ ಇಲಾಖೆ ತಂಡ, ಸುಜಯ ಪರಕಾಳಿ ನೇತೃತ್ವದ ನೇವಲ್ ಎನ್‌.ಸಿ.ಸಿ. ಕೆ.ಇ.ಬೋರ್ಡ್ಸ್‌ ಸ್ಕೂಲ್, ವಿಜಯ ಹಿರೇಮಠ ನೇತೃತ್ವದ ಆದರ್ಶ ವಿದ್ಯಾಲಯದ ಭಾರತ ಸೇವಾ ದಳ, ಸಹನಾ ಮುನವಳ್ಳಿ ನೇತೃತ್ವದ ಪ್ರಜಂಟೇಶನ್ ಸ್ಕೂಲ್, ಗೌತಮಿ ಭಟ್ ನೇತೃತ್ವದ ಕೆ.ಎನ್‌.ಕೆ ಬಾಲಕೀಯರ ಪ್ರೌಢಶಾಲೆ, ರಿಷಭ್ ಘಾರವಾಲೆ ನೇತೃತ್ವದ ರಾಜೀವಗಾಂಧಿ ಆಂಗ್ಲ ಮಾಧ್ಯಮ ಶಾಲೆ, ಯುವರಾಜ ಕೊಲ್ಹಾರ  ನೇತೃತ್ವದ ಸೇಂಟ್ ಜೋಸೆಪ್ಸ್‌ ಸ್ಕೂಲ್, ಮಹಮ್ಮದ ಉಮರ್ ನೇತೃತ್ವದ ಶ್ರೀ ಎನ್‌.ಎ.ಮುತ್ತಣ್ಣ ಸ್ಮಾರಕ ಪೋಲಿಸ್ ಮಕ್ಕಳ ವಸತಿ ಶಾಲೆಯ ಮಕ್ಕಳು ಕವಾಯತಿನಲ್ಲಿ ಭಾಗಿಯಾಗಿದ್ದರು. 

ಜಿಲ್ಲಾ ಸಶಸ್ತ್ರ ಪೊಲೀಸ್ ಬ್ಯಾಂಡನ ಬ್ಯಾಂಡ್ ಮಾಸ್ಟರ್ ಎ.ಆರ್‌.ಎಸ್‌.ಐ. ಅವರಾದ ವಾಯ್‌.ಎಫ್‌.ಭಜಂತ್ರಿ, ಸ್ಟಿಕ್ ಮೇಜರ್  ಸಾಗರ ಬಸರಕೋಟಿ ಅವರ ತಂಡ ಸುಶ್ರಾವ್ಯವಾಗಿ ಬ್ಯಾಂಡ್ ನುಡಿಸಿತು. 

ಪಥಸಂಚಲನದಲ್ಲಿ ಬಹುಮಾನ ವಿಜೇತ ತಂಡಗಳು: 69ನೇ ಕರ್ನಾಟಕ ರಾಜ್ಯೋತ್ಸವದ ಇಂದಿನ ಕವಾಯತಿನಲ್ಲಿ ಭಾಗಿಯಾಗಿದ್ದ, ಕುಮಾರ ಮಹಮದ್ ಉಮರ್ ಅವರ ನೇತೃತ್ವದ ಎನ್‌.ಎ.ಮುತ್ತಣ್ಣ ಸ್ಮಾರಕ ಪೋಲಿಸ್ ಮಕ್ಕಳ ವಸತಿ ಶಾಲೆಯ ತಂಡವು  ಪ್ರಥಮ ಸ್ಥಾನ ಪಡೆದುಕೊಂಡಿದೆ. 

ಕುಮಾರ ಸುಜಯ ಪರಕಾಳಿ ಅವರ ನೇತೃತ್ವದ ಕೆ.ಇ.ಬೋರ್ಡ್ಸ್‌ ಸ್ಕೂಲ್(ನೇವಲ್ ಎನ್‌.ಸಿ.ಸಿ)ನ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.  

ಕುಮಾರಿ ಗೌತಮಿ ಭಟ್ ಅವರ ನೇತೃತ್ವದ ಕೆ.ಎನ್‌.ಕೆ. ಬಾಲಕಿಯರ ಶಾಲೆಯ ತಂಡವು  ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಹುಮಾನ ವಿಜೇತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಶಿಲ್ಡ್‌ ಮತ್ತು ಪ್ರಮಾಣಪತ್ರ ವಿತರಿಸಿ, ಶುಭಾಶಯ ಕೋರಿದರು. 

ಸಾಂಸ್ಕೃತಿಕ ಸೌರಭ: ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ನೇರೆದ ಜನರ ಗಮನ ಸೆಳೆದರು. 

ಜೆಎಸ್‌ಎಸ್ ಸಂಸ್ಥೆಯ ಕನ್ನಡ ಮಾಧ್ಯಮ  ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಕರ್ನಾಟಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಮತ್ತು ಬಿಜಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯಗಳು ಜರುಗಿದವು.