ಹೊಸ ಇತಿಹಾಸ ಬರೆದ ಬೆಳಗಾವಿ ಕನ್ನಡ ಹಬ್ಬ : ಯಾರಪ್ಪಂದ ಎನೈತಿ ಬೆಳಗಾವಿ ನಮ್ಮದೈತಿ ಎಂದು ಸಾರಿದ ಕನ್ನಡಿಗರು

ಬೆಳಗಾವಿ : ಬೆಳಗಾವಿಯಲ್ಲಿ ನಡೆದ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಲಕ್ಷ ಲಕ್ಷ ಕನ್ನಡಿಗರು ಭಾಗಿಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ ಅಲ್ಲದೆ ಯಾರಪ್ಪಂದ ಎನ ಐತಿ ಬೆಳಗಾವಿ ನಮ್ಮದ ಐತಿ ಎಂದು ಸಾರಿ ಹೇಳುವ ಮೂಲಕ ನಾಡದ್ರೋಹಿಗಳು ಮೈಮುಟ್ಟಿಕೊಳ್ಳುವ ರೀತಿ ಉತ್ತರ ನೀಡಿದ್ದಾರೆ.  

  ನಗರದಲ್ಲಿ ಎಲ್ಲಿ ನೋಡಿದರಲ್ಲಿ ರಾರಾಜಿಸಿದ ಹಳದಿ ಕೆಂಪು ಬಣ್ಣದ ಕನ್ನಡ ಧ್ವಜಗಳು. ಚಿಕ್ಕವರು ಹಿರಿಯರು ಎಲ್ಲರ ಕೈಯಲ್ಲಿ ಧ್ವಜ ಹಿಡಿದು ಕುದಿದು ಕುಪ್ಪಳಿಸಿದ ಕನ್ನಡಿಗರು, ಇವು ಶುಕ್ರವಾರ ಬೆಳಿಗ್ಗೆಯಿಂದ ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದೃಶ್ಯಗಳು. ಕನ್ನಡ ಹಬ್ಬಕ್ಕೆ ಹರಿದು ಬಂದ ಜನಸಾಗರ ಕಂಡು ದಂಗಾದ ನಾಡದ್ರೋಹಿಗಳು. 


   ಕಂಡು ಕಂಡಲ್ಲಿ ಎಲ್ಲಾ ಕೇಳಿಬರುವ ಕನ್ನಡ ನಾಡು ನುಡಿಯ ಹಾಡುಗಳು ಕಣ್ಣಾಡಿಸಿದಲ್ಲೆಲ್ಲಾ ಬಾನೆತ್ತರಕ್ಕೆ ಚಿಮ್ಮುವ ಕನ್ನಡ ಧ್ವಜ...ಡಿಜೆ ಹಾಡುಗಳಿಗೆ ಹುಚ್ಚೆದ್ದು ಕನ್ನಡಾಭಿಮಾನಿಗಳು ಕನ್ನಡ ಹಬ್ಬವನ್ನು ಆಚರಿಸಿದರು. 

  ಶುಕ್ರವಾರ ಬೆಳಿಗ್ಗೆಯಿಂದ ಬೆಳಗಾವಿಯತ್ತ ಮುಖ‌ ಮಾಡಿದ ಕನ್ನಡದ ಮನಸುಗಳೆಲ್ಲಾ ಒಂದಾಗಿ ತಾಯಿ ಭುವನೇಶ್ವರಿಯ ತೇರನ್ನೆಳೆಯುವ ಕನ್ನಡ ರಾಜ್ಯೋತ್ಸವದ ಅದ್ಧೂರಿ ಮೆರವಣಿಗೆಯಲ್ಲಿ ನಾವೆಲ್ಲರು ಕನ್ನಡಿಗರು ಯಾರಿಗಿಲ್ಲ ಕಮ್ಮಿ ಎನ್ನುವ ಸಂದೇಶ ಸಾರಿದರು.

   ವಯಸ್ಸಿನ ಅಂತರವಿಲ್ಲದೆ ಬಡವ ಬಲ್ಲಿದನೆನ್ನದೆ ನಗರದ ಚೆನ್ನಮ್ಮ ವೃತ್ತದಲ್ಲಿ ಕುಣಿದು ಕುಪ್ಪಳಿಸುವ ಜನಸ್ತೋಮವನ್ನು ಕಂಡಾಗ ಎಲ್ಲರಲ್ಲೂ ಮೂಡುವ ಮೊದಲ ಮಾತು ಕನ್ನಡಿಗನಾಗಿ ಹುಟ್ಟಿದರೆ ಒಮ್ಮೆಯಾದರೂ ಬೆಳಗಾವಿ ರಾಜ್ಯೋತ್ಸವವನ್ನು ನೋಡಲೇಬೇಕು. ಚೆನ್ನಮ್ಮ ವೃತ್ತದಲ್ಲಿ ನಾಲ್ಕು ಸ್ಟೆಪ್ಪು ಹಾಕಲೇಬೇಕು. ಹೌದು, ಕೇವಲ ಬೆಳಗಾವಿ ಜಿಲ್ಲೆಯಿಂದ ಮಾತ್ರವಲ್ಲ; ರಾಜ್ಯ ಹೊರರಾಜ್ಯದಲ್ಲಿದ್ದ ಆಸಕ್ತ ಕನ್ನಡಿಗರು ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಮೆರವಣಿಗೆಯ ರಂಗು ಹೆಚ್ಚಿಸಿದರು. 


    ಕನ್ನಡ ಡಿಂಡಿಮವಾ.... ಎಂದು ಮರಾಠಿಗರೂ ತಾಯ್ನೆಲದ ಅಭಿಮಾನದಿಂದ ಭಾಷಾ ಭಾವೈಕ್ಯತೆ ಮೆರೆದರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಆಸೀಫ ಸೇಠ ಅವರು ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು. ನೂರಕ್ಕೂ ಮಿಕ್ಕಿದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದವು. ಇದರೊಂದಿಗೆ ಸರ್ಕಾರದ ವಿವಿಧ ಇಲಾಖೆಗಳು ಕೂಡಾ ಭಾಗವಹಿಸಿ ಗಮನ ಸೆಳೆದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಸ್ ಪಿ ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶೀಂಧೆ, ಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

   ನಾವು ಬೆಳಗಾವಿ ಹುಡುಗರು.... ಟೀ ಶರ್ಟ್ ಜತೆಗೆ ಈ ವರ್ಷದ ಹೊಸ ಬರಹ "ಲೇ ಬರಬ್ಯಾಡ್ರಿ ಬೆಳಗಾವಿ ಕೇಳಾಕ, ಇಲ್ಲಿ ಕನ್ನಡಿಗರು ಬಾಳ ಖಡಕ್" ಬರಹದ ಜೊತೆಗೆ ಕನ್ನಡ ಕುಲ ತಿಲಕ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರ ಭಾವಚಿತ್ರ ಇರುವ ಬಿಳಿ ಟೀ ಶರ್ಟ್ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರೂ ಧರಿಸಿ ಬಂದು ಕುಣಿಯುತ್ತಿದ್ದುದು ನೋಡುವ ಕಂಗಳಿಗೆ ಹಬ್ಬವಾಗಿತ್ತು.

   ಮಕ್ಕಳು ಹಿರಿಯರೆನ್ನದೆ ಎಲ್ಲರೂ ಕಪಾಳದ ಮೇಲೆ ಕರ್ನಾಟಕದ ಭೂಪಟ ಎಳೆದು ಹಣೆಗೆ ಕೆಂಪು ಹಳದಿ ತಿಲಕವನ್ನಿಟ್ಟು ಕೆಂಪು ಹಳದಿ ಬಣ್ಣದ ಕನ್ನಡ ಶಾಲು, ಟೊಪ್ಪಿ, ಕೈಗೆ ಬ್ಯಾಂಡ್‌ಗಳನ್ನು ಧರಿಸಿದ ಕನ್ನಡ ಮನಸುಗಳು ಮನದಣಿಯೆ ಕುಣಿದು ಸಂಭ್ರಮ ಪಡುತ್ತಿದ್ದುದು ವಿಶೇಷವಾಗಿತ್ತು.

   ಬೆಳಗಾವಿ ನಗರ ಪೊಲೀಸರು ರಾಜ್ಯೋತ್ಸವದ ಆಚರಣೆಗೆ ಯಾರ ದೃಷ್ಟಿ ತಾಗದಂತೆ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು. ಕಿತಾಪತಿ ಮಾಡುವವರ ಮೇಲೆ ಪೊಲೀಸರ ಹದ್ದಿನಕಣ್ಣು ನೆಟ್ಟಿತ್ತು.

   ರಾಜ್ಯೋತ್ಸವದ ಮುನ್ನಾ ದಿನವೇ ನಗರದಲ್ಲಿ ವಿಶೇಷ ದೀಪಾಲಂಕಾರದ ಮೂಲಕ ಸೌಂದರ್ಯೀಕರಣಗೊಳಿಸಿದ ಬೆಳಗಾವಿ ಜಿಲ್ಲಾಡಳಿತ ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ ಮೆರುಗು ತಂದುಕೊಟ್ಟರು.

   ಮೆರವಣಿಗೆಯ ಕಲಾರೂಪಕದಲ್ಲಿ ಕನ್ನಡಕ್ಕಾಗಿ ಜ್ಞಾನಪೀಠ ಪುರಸ್ಕಾರ ಪಡೆದವರ ಪರಿಚಯ, ವೀರರಾಣಿ ಕಿತ್ತೂರು ಚೆನ್ನಮ್ಮ, ತಾಯಿ ಭುವನೇಶ್ವರಿಯ ವೇಷ ಭೂಷಣದಲ್ಲಿ ಮಕ್ಕಳು ಗಮನ ಸೆಳೆದರು. ಇದಲ್ಲದೆ ಕನ್ನಡದ ಹಿರಿಯ ಸಾಹಿತಿಗಳು, ಹೋರಾಟಗಾರರನ್ನು ಕೂಡ ಬಳಸಿಕೊಳ್ಳಲಾಯಿತು. ಇನ್ನು ವಿವಿಧ ಸಂಘ ಸಂಸ್ಥೆಗಳು ಕೂಡಾ ತಾಯಿ ಭುವನೇಶ್ವರಿಯ ಕಲಾಕೃತಿಗಳ ಮೆರವಣಿಗೆ, ಕಿತ್ತೂರು ಚೆನ್ನಮ್ಮನ ಮೂರ್ತಿಯನ್ನು ಮೆರವಣಿಗೆಯಲ್ಲಿ ಸಾಗಿಸುತ್ತಿದ್ದರು. ಇದರ ಜತೆ ಜತೆಗೆ ವಿವಿಧ ಕಲಾ ರೂಪಕಗಳು ಮೆರವಣಿಗೆಯನ್ನು ಆಕರ್ಷಣೀಯಗೊಳಿಸಿದವು.

ಕತ್ತಲಲ್ಲು ಬಾರಿಸಿದ ಕನ್ನಡ ಡಿಂ ಡಿಮ : 

   ಬೆಳಗಾವಿಯಲ್ಲಿ ದಾರಿಯುದ್ಧಕ್ಕೂ ಜನ ಅಂಗಡಿ ಮುಂಗಟ್ಟುಗಳ ಮುಂದೆ ವಿವಿಧ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದರು. ಕೆಲವರಂತೂ ಮೆರವಣಿಗೆ ಮಧ್ಯೆ ನಿಂತು ಫೇಸ್‌ಬುಕ್ ಲೈವಲ್ಲಿ ಕಾಣಿಸಿಕೊಂಡರೆ, ಹಲವರು ಸೆಲ್ಫೀ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ನೋಟ ಸಾಮಾನ್ಯವಾಗಿತ್ತು. ಎಲ್ಲಾ ಸಂಘಟನೆಗೂ ತಮ್ಮ ಬ್ಯಾನರ ಕಟ್ಟಿದ್ದ ಕಾರಣ ನಗರಪೂರ್ತಿ ಕನ್ನಡಮಯವಾಗಿ ಕಂಗೋಳಿಸುತ್ತಿತ್ತು. ಬೆಳಿಗ್ಗೆ ಶುರುವಾದ ಆ ಹುಮ್ಮಸ್ಸು ಉತ್ಸಾಹ ತಡರಾತ್ರಿಯಾದರೂ ಕಿಂಚಿತ್ತು ಕುಗ್ಗಿದಂತಿರಲಿಲ್ಲ.