ಬೆಂಗಳೂರು, ಫೆ. 13, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಕಾಸಸೌಧದಲ್ಲಿ ಸರ್ಕಾರದಿಂದ ತಮಗೆ ಹಂಚಿಕೆಯಾಗಿರುವ ಕೊಠಡಿಗೆ ಇಂದು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ನೆರವೇರಿಸಿ, ಕಾರ್ಯಾರಂಭ ಮಾಡಿದರು. ವಿಕಾಸಸೌಧದ ನೆಲಮಹಡಿಯ ಕೊಠಡಿ ಸಂಖ್ಯೆ 38 ರಲ್ಲಿ ಹಂಚಿಕೆಯಾಗಿರುವ ಕೊಠಡಿಗೆ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಮೊದಲ ಬಾರಿಗೆ ಕಚೇರಿ ಪ್ರವೇಶಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಸಹಕಾರ ಇಲಾಖೆ ನೀಡಿರುವುದು ಸಂತಸ ತಂದಿದೆ. ತಮಗೆ ಸಹಕಾರ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ತಿಳುವಳಿಕೆ ಇದೆ. ಅತಿ ಶೀಘ್ರದಲ್ಲೆ ಹಿರಿಯ ಸಹಕಾರಿಗಳ ಸಭೆ ಕರೆದು ಇಲಾಖೆಗೆ ಸಂಬಂಧಿಸಿ ಮಾಹಿತಿ ಪಡೆಯಲಾಗುವುದು. ಸಹಕಾರ ರಂಗದ ಸಾಲ ಮನ್ನಾ, ಯಶಸ್ವಿನಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಪಕ್ಷದ ಯಾವುದೇ ಗೆಳೆಯರಿಗೆ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ ವಿಷಯದಲ್ಲಿ ಕೋರ್ಟ್ ಕೇಸ್ ಇದ್ದ ಕಾರಣ ವಿಳಂಬವಾಗಿದೆ. ಬುಧವಾರ ಮುನಿರತ್ನ ಕೇಸ್ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಕೋರ್ಟ್ ನಲ್ಲಿ ಕೇಸ್ ಇತ್ಯರ್ಥವಾದ ಬಳಿಕ ಶೀಘ್ರದಲ್ಲಿಯೇ ಅವರು ಕೂಡ ಮತ್ತೆ ಸಕ್ರಿಯ ರಾಜಕೀಯಕ್ಕೆ ಬರುತ್ತಾರೆ. ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.