ನವದೆಹಲಿ 09: ಭಾರತ ಪಾಕಿಸ್ತಾನದ ನಡುವೆ ಇರುವ ಉದ್ವಿಗ್ನ ಪರಿಸ್ಥಿತಿ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಸೌತ್ ಬ್ಲಾಕ್‌ನಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರು. ಗಡಿಯಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಕಾರ್ಯತಂತ್ರದ ಕುರಿತು ರಾಜನಾಥ್ ಸಿಂಗ್ ಅವರಿಗೆ ವಿವರಿಸಿದ್ದಾರೆ.
ರಕ್ಷಣಾ ಸಚಿವರೊಂದಿಗೆ ಇಂದಿನ ಸಭೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಮತ್ತು ರಕ್ಷಣಾ ಕಾರ್ಯದರ್ಶಿ ಆರ್ ಕೆ ಸಿಂಗ್ ಸೇರಿದಂತೆ ಸೇನಾ ಉನ್ನತ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಇದ್ದರು.
ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳು ಮತ್ತು ಮೂಲಸೌಕರ್ಯಗಳ ಮೇಲೆ ಗುರಿಯಿಟ್ಟು ನಡೆಸಿದ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು.
‘ಆಪರೇಷನ್ ಸಿಂದೂರ್’ ಇನ್ನೂ ಮುಂದುವರೆದಿದ್ದು, ಪಾಕಿಸ್ತಾನದಿಂದ ಯಾವುದೇ ಪ್ರಚೋದನೆ ಅಥವಾ ಉಲ್ಬಣಕ್ಕೆ ಪ್ರತಿಕ್ರಿಯಿಸಲು ಭಾರತೀಯ ಸೇನೆಯು ಹೆಚ್ಚಿನ ಜಾಗರೂಕತೆಯಿಂದ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.
ನಮ್ಮ ಸೈನಿಕರು ಕದನವನ್ನು ಉಲ್ಬಣಗೊಳಿಸುವ ಉದ್ದೇಶವಿಲ್ಲ, ಆದರೆ ಶತ್ರು ಪಡೆಗಳು ಮತ್ತೆ ದಾಳಿ ಮಾಡಿದರೆ, ನಾವು ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯುವಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ್ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸಿದೆ. ಭಾರತೀಯ ಭೂ ಸೇನೆ ಮತ್ತು ವಾಯುಪಡೆ ಎರಡೂ ಕ್ಷಿಪಣಿ ವ್ಯವಸ್ಥೆಯನ್ನು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.