ಮಂಡ್ಯ, ಜೂ.3, ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಶ್ರೀಗಳ ಸಾನ್ನಿಧ್ಯದಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತೀರಾ ಅಗತ್ಯವಿರುವ ಕೋವಿಡ್ -19 ಟೆಸ್ಟಿಂಗ್ ಲ್ಯಾಬ್ ಅನ್ನು ಕೆಲವೇ ದಿನಗಳಲ್ಲಿ ನಿರ್ಮಿಸಿದ್ದಾರೆ. ಇಷ್ಟುದಿನ ಟೆಸ್ಟಿಂಗ್ ರಿಪೋರ್ಟ್ ಗಾಗಿ ಒಂದೆರಡು ದಿನ ಕಾಯಬೇಕಾಗುತ್ತಿತ್ತು. ಈಗ 24 ಗಂಟೆಗಳಲ್ಲಿ ವರದಿ ಸಿಗಲಿದೆ.
ಟೆಸ್ಟಿಂಗ್ ಗೆ ಬೇಕಾದ ಅಗತ್ಯ ಹಣವನ್ನು ಸರ್ಕಾರ ಭರಿಸಲು ಸಿದ್ಧವಿದೆ ಎಂದು ಹೇಳಿದರು.ಸಾರ್ವಜನಿಕರು ಯಾರೂ ಕೂಡ ಮದ್ಯ ಹಾಗೂ ಧೂಮಪಾನ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು. ಇದರಿಂದ ಇಮ್ಯುನಿಟಿ ಪವರ್ ಕಡಿಮೆ ಆಗತ್ತದೆ. ಆರೋಗ್ಯಯುತ ಜೀವನಕ್ಕೂ ಇದು ಮಾರಕ. ಹೀಗಾಗಿ ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು. ಮೈಶುಗರ್ ಸಕ್ಕರೆ ಕಾರ್ಖಾನೆ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗಿದೆ. ಖಾಸಗಿಯವರಿಗೆ ಕೊಡುವುದು ಬೇಡ ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೆ, ಅದರಂತೆ ಖಾಸಗಿಗೆ ಕೊಡುವ ನಿರ್ಧಾರ ಕೈ ಬಿಡಲಾಗಿದೆ. ಸರ್ಕಾರವೇ ನಡೆಸಬೇಕಾ ಅಥವಾ ಕಾರ್ಯಾಚರಣೆ, ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡಬೇಕಾ ಎನ್ನುವುದನ್ನು ಮುಖ್ಯಮಂತ್ರಿ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.ಇದಕ್ಕು ಮುನ್ನ ಸಚಿವರು ವಿಶ್ವ ಪರಿಸರ ದಿನದ ಅಂಗವಾಗಿ ಮಠದ ಆವರಣದಲ್ಲಿ ಗಿಡ ನೆಟ್ಟರು. ಶಾಸಕರ ಸುರೇಶ್ ಗೌಡ, ಪರಿಷತ್ ಸದಸ್ಯ ಅಪ್ಪಾಜಿ ಗೌಡ, ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.