ಬೆಂಗಳೂರು, ಮಾ.24, ಕರೋನಾ ಸೋಂಕು ಹಿನ್ನೆಲೆಯಲ್ಲಿ ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ ವ್ಯಾಪ್ತಿಯ ನೌಕರರು ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯ ಸಚಿವ ಡಾ. ನಾರಾಯಣಗೌಡ ಸೂಚಿಸಿದ್ದಾರೆ. ಮೂರೂ ಇಲಾಖೆಯ ಕಾರ್ಯದರ್ಶಿಗಳಿಗೆ ಸಚಿವರು ಈ ಬಗ್ಗೆ ಆದೇಶ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ರೇಷ್ಮೆ ಬೆಳಗಾರರ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ರೇಷ್ಮೆ ಗೂಡನ್ನ ಮಾರಾಟ ಮಾಡದೆ ಇಡಲು ಸಾಧ್ಯವಿಲ್ಲ. ರೈತರು ಮಾರುಕಟ್ಟೆಗೆ ಬಂದಾಗ ಜನಜಂಗುಳಿ ಆಗುತ್ತದೆ. ಈ ಸಂದರ್ಭದಲ್ಲಿ ಕರೋನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣಗೌಡ ಸೂಚಿಸಿದ್ದಾರೆ.