ಕಲಬುರಗಿ, ಮೇ 12,ಕೊರೊನಾ ಹಾಟ್ ಸ್ಪಾಟ್ ಆಗಿರುವ ಸೂರ್ಯ ನಗರಿ ಕಲಬುರಗಿಗೆ ಈಗ ಮತ್ತೊಂದು ತಲೆನೋವು ಆರಂಭವಾಗಿದೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಿಲುಕಿದ್ದ ವಲಸಿಗ ಕಾರ್ಮಿಕರು ವಿಶೇಷ ಶ್ರಮಿಕ ರೈಲಿನ ಮೂಲಕ ತಡರಾತ್ರಿ ಕಲಬುರಗಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಕಾರ್ಮಿಕರನ್ನು ಹೊತ್ತಿಕೊಂಡು ಮುಂಬೈನಿಂದ ಸೋಮವಾರ ಹೊರಟಿದ್ದ ವಿಶೇಷ ರೈಲು ತಡರಾತ್ರಿ 2 ಗಂಟೆಗೆ ಕಲಬುರಗಿ ರೈಲ್ವೆ ನಿಲ್ದಾಣ ತಲುಪಿತು.ಕಾರ್ಮಿಕರನ್ನು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಜಿಲ್ಲಾಧಿಕಾರಿ ಶರತ್ ಬಿ ಅವರು ರೈಲು ನಿಲ್ದಾಣದಲ್ಲಿ ಬರಮಾಡಿಕೊಂಡರು.ಕುಟುಂಬ ಸಮೇತ ಕಲಬುರಗಿಗೆ ವಾಪಸ್ಸಾದ 1,200ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನುರೈಲು ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸೀಲು ಹಾಕಿ ಅವರವರ ಊರುಗಳಿಗೆ ಬಸ್ಸುಗಳಲ್ಲಿ ಕಳುಹಿಸಿ ಕೊಡಲಾಯಿತು.ಈಗಾಗಲೇ ಕಾರ್ಮಿಕರನ್ನು ಅವರ ಊರುಗಳ ಬಳಿಯೇ ಸರ್ಕಾರಿ ಕ್ವಾರಂಟೈನ್ ನಲ್ಲಿ ಇರಿಸಲು ಜಿಲ್ಲಾಡಳಿತ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.