ಬೆಂಗಳೂರು,
ಮಾ 29, ಕೊರೋನಾ ಮಹಾಮಾರಿಯಿಂದ ಕಾರ್ಮಿಕರ ವಲಸೆಯನ್ನು ತಪ್ಪಿಸಲು ರಾಜ್ಯದ
ಎಲ್ಲಾ ಮಹಾನಗರ ಪಾಲಿಕೆ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾರ್ಮಿಕರು
ಮತ್ತು ವಲಸೆ ಕಾರ್ಮಿಕರಿಗಾಗಿ ವಸತಿ ಸಹಿತ ಊಟೋಪಚಾರದ ವ್ಯವಸ್ಥೆ ಕಲ್ಪಿಸುವಂತೆ ಕಾರ್ಮಿಕ
ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಜಿಲ್ಲೆ ಮತ್ತು
ರಾಜ್ಯಕ್ಕೆಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ
ತಮ್ಮ ಹುಟ್ಟಿದ ಊರುಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಈ ಕ್ರಮ
ಕೈಗೊಂಡಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ ನಲ್ಲಿ ತಲಾ
ಒಂದರಂತೆ ಸಮುದಾಯ ಭವನ, ಕಲ್ಯಾಣ ಮಂಟಪ, ಖಾಸಗಿ ಕಲ್ಯಾಣ ಮಂಟಪಗಳನ್ನು ವಶಕ್ಕೆ
ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಕಲ್ಯಾಣ ಮಂಟಪಗಳನ್ನು ವಶಕ್ಕೆ ಪಡೆಯಬೇಕು ಎಂದು ಹೇಳಿದೆ. ಇಂತಹ ಸ್ಥಳಗಳಲ್ಲಿ ವಲಸೆ, ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ವಸತಿ ಮತ್ತು ಉಟೋಪಚಾರದ ವ್ಯವಸ್ಥೆ ಮಾಡುವಂತೆ ಆದೇಶಿಸಲಾಗಿದೆ.ಕಾರ್ಮಿಕರ
ವಸತಿ, ಉಟೋಪಚಾರಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ
ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗೆ ಒದಗಿಸಿರುವ
ಅನುದಾನದಿಂದ ಭರಿಸಬೇಕು ಎಂದು ಸೂಚಿಸಿದೆ.