ಮೈಸೂರು, ಜೂನ್.5,ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಾಗಿರುವ ಮತಗಳ ಹಂಚಿಕೆ ಮಾಡಿ, ಮೊದಲು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಆದ್ಯತೆ ನೀಡುತ್ತೇವೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಂಚಿಕೆ ಮಾಡಿದ ಬಳಿಕವೂ ಉಳಿಯುವ ಹೆಚ್ಚುವರಿ ಮತಗಳನ್ನು ಏನು ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ. ಹೈಕಮಾಂಡ್ ನೀಡುವ ಆದೇಶಕ್ಕೆ ನಾವು ಬದ್ಧರಾಗುತ್ತೇವೆ ಎಂದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕಾಂಗ ನಾಯಕ ಸಿದ್ದರಾಮಯ್ಯ, ತಮ್ಮ ಶಿಫಾರಸ್ಸನ್ನು ಈಗಾಗಲೇ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಿದ್ದು , ಖರ್ಗೆ ಅವರು ಸ್ಪರ್ಧೆಗೆ ಆಸಕ್ತರಾಗಿದ್ದರೆ ಶಿಫಾರಸು ಮಾಡುತ್ತೇನೆ ಎಂದಿದ್ದೆ. ಹೈಕಮಾಂಡ್‌ಗೆ ಏನು ಹೇಳಬೇಕೋ ಎಲ್ಲವನ್ನೂ ತಿಳಿಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಕೊರೋನಾಗೆ ಯಾವುದೇ ಔಷಧ ಇಲ್ಲ. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದೇ ಔಷಧ ಕಂಡು ಹಿಡಿಯುವವರೆಗೂ ಮದ್ದು. ಫ್ರಾನ್ಸ್‌ನ ಶಾಲೆಯಲ್ಲಿ ಮಕ್ಕಳಿಗೆ ಕೊರೋನಾ ಬಂದಿದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಇನ್ನೂಹೆಚ್ಚಿನ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಇನ್ನೂ ಮೂರು ತಿಂಗಳು ಶಾಲೆಗಳನ್ನು ಆರಂಭಿಸಬಾರದು. ಸಾಧ್ಯವಾದರೆ ಎರಡು ಪಾಳಿಯಲ್ಲಿ ತರಗತಿ ಮಾಡಬೇಕು. ಮಕ್ಕಳಿಗೆ ಕೊರೋನಾ ಏನಾದರೂ ತಗುಲಿದರೆ ಇಡೀ ಕುಟುಂಬಕ್ಕೆ ಹರಡುತ್ತದೆ. ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡು ಶಾಲೆ ತೆರೆಯಬೇಕು. ಸಚಿವ ಸುರೇಶ್ ಕುಮಾರ್‌ಗೆ ಈ ಬಗ್ಗೆ ಮಾತನಾಡುವುದಾಗಿ ಹೇಳಿದ ಸಿದ್ದರಾಮಯ್ಯ, ಎಲ್ಲಾ ರೀತಿಯ ಶಾಲೆಗಳಿಗೂ ಇದು ಅನ್ವಯ ಆಗಬೇಕು ಎಂದು ಆಗ್ರಹಿಸಿದರು.ಕೊರೊನಾಗಾಗಿ 53 ಸಾವಿರ ಕೋಟಿ ಸಾಲ ಪಡೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಹೇಳಿದ ಮಾತಿನಂತೆ ಅವರು ಒಂದು ಕೋಟಿ ಜನರಿಗೆ 10 ಸಾವಿರ ರೂ.ನೀಡಲಿ. ತಾವೇನಾದರೂ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದಿದ್ದರೆ ಬರೋಬ್ಬರಿ 1ಕೋಟಿ ಜನರಿಗೆ 10 ಸಾವಿರ ರೂ.ಕೊಡುತ್ತಿದೆ. ಸಾಲ ಮಾಡಿಯಾದರೂ ಒಂದು ಕೋಟಿ ಜನರಿಗೆ ಸಾಲ ಕೊಡುತ್ತಿದ್ದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮಾತುಗಳಿಂದ ತಿವಿದರು.