ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ

Meaningful celebration of the birth anniversaries of various eminent personalities

ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ 

-ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. 

ಹಾವೇರಿ 05  : ಜಿಲ್ಲಾಡಳಿತದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಭಗವಾನ್ ಬುದ್ದ ಜಯಂತಿಗಳ ಕಾರ್ಯಕ್ರಮ ಅರ್ಥಪೂರ್ಣ  ಹಾಗೂ ವಿಜೃಂಭಣೆ ಆಚರಣೆಗೆ  ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಅವರು ಸೂಚನೆ ನೀಡಿದರು. 

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಭಗವಾನ್ ಬುದ್ದ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ  ಜಯಂತಿಯನ್ನು ಮೇ 10 ರಂದು ಬೆಳಿಗ್ಗೆ 11 ಗಂಟೆಗೆ  ಹಾಗೂ ಭಗವಾನ್ ಬುದ್ದ ಜಯಂತಿಯನ್ನು ಮೇ 12 ರಂದು ಬಳಿಗ್ಗೆ 11 ಗಂಟೆಗೆ ಹಾವೇರಿ ನಗರದ  ಗಾಂಧೀ ಭವನದಲ್ಲಿ ಆಚರಣೆಗೆ ತೀರ್ಮಾನಿಸಲಾಯಿತು. 

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಮೆರಣಿಗೆಗೆ ಕಲಾ ತಂಡ, ಉಪನ್ಯಾಸಕರು,  ವೇದಿಕೆ, ಧ್ವನಿ-ಬೆಳಕು, ಆಸನ, ಕುಡಿಯುವ ನೀರು, ಉಪಹಾರ, ವ್ಯವಸ್ಥೆಯನ್ನು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಮನ್ವಯದಿಂದ ಮಾಡಬೇಕೆಂದು ಸಲಹೆ ನೀಡಿದರು. 

ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ  ಎಂ.ಎಂ.ಮೈದೂರ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಆರ್‌.ವಿ.ಚಿನ್ನಿಕ್ಕಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು. 

ಚಾಲನಾ ವೃತ್ತಿ ಪರೀಕ್ಷೆ 

ಹಾವೇರಿ 05 :  ಹುಮನಾಬಾದ ಹಾಗೂ ಹುಬ್ಬಳ್ಳಿಯಲ್ಲಿ  ಜರುಗಿದ ಚಾಲನಾ ವೃತ್ತಿ ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ (ದಿ 05-05-2025 ರಿಂದ 10-05-2025 ರವರೆಗೆ ಗೈರು ಹಾಜರಾದ ಅಭ್ಯರ್ಥಿಗಳನ್ನು ಒಳಗೊಂಡಂತೆ) ದಿನಾಂಕ 12-05-2025 ರಿಂದ 24-05-2025 ರವರೆಗೆ ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ.   

ಈ ಕುರಿತು ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ವಿಳಾಸ ತಿತಿತಿ.ಟಿತಿಞಡಿಣಛಿ.ಞಚಿಡಿಟಿಚಿಣಚಿಞಚಿ.ರಠ.ಟಿ ನ್ನು ನಿರಂತರವಾಗಿ ಗಮನಿಸುವಂತೆ ತಿಳಿಸಲಾಗಿದೆ. ಇದು ಅಂತಿಮ ಅವಕಾಶವಾಗಿದ್ದು, ದಿನಾಂಕ 24-05-2025 ರ ನಂತರ ಚಾಲನಾ ವೃತ್ತಿ ಪರೀಕ್ಷೆಗೆ ಪುನಃ ಅವಕಾಶ ನೀಡಲಾಗುವುದಿಲ್ಲ ಎಂದು ವಾ.ಕ.ರ.ಸಾ.ಸಂಸ್ಥೆ ಹುಬ್ಬಳ್ಳಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

“ಜ್ಞಾನ ಅಂಚೆ” ಸೇವೆ ಆರಂಭ 

ಹಾವೇರಿ 05 :  ಭಾರತೀಯ ಅಂಚೆ ಇಲಾಖೆಯು ಮೇ 1 ರಿಂದ "ಜ್ಞಾನ ಅಂಚೆ" ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ. ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಹಾಗೂ ಸಾಹಿತಿ  ಸತೀಶ ಕುಲಕರ್ಣಿ ಅವರು "ಜ್ಞಾನ ಅಂಚೆ" ಸೇವೆಗೆ ಚಾಲನೆ ನೀಡಿದರು.   

ಮಕ್ಕಳ ಜ್ಞಾನಾರ್ಜನೆಗೆ ಬೇಕಾದ ಪಠ್ಯ ಪುಸ್ತಕ, ಗೈಡ್, ಮುದ್ರಿತ ನೋಟ್ಸ್‌ ಹಾಗೂ ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ಸೇವೆ ಇದಾಗಿದೆ. ಈ ಸೇವೆ ಅಡಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ "ಜ್ಞಾನ ಅಂಚೆ" ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕಳುಹಿಸುವವರು ಮತ್ತು ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸ ಇರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ ಇರಬಾರದು. ಕನಿಷ್ಟ 300 ಗ್ರಾಂನಿಂದ ಗರಿಷ್ಟ 5 ಕೆ.ಜಿ. ವರೆಗಿನ ಪಾರ್ಸಲ್ ಗಳನ್ನು ಮಾತ್ರ 'ಜ್ಞಾನ ಅಂಚೆ' ಎಂದು ಪರಿಗಣಿಸಲಾಗುತ್ತದೆ ಎಂದು ಅಧೀಕ್ಷಕರು ಮಾಹಿತಿ ಒದಗಿಸಿದರು.  

ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ  ಸೋಮಶೇಖರ ಸಾರಪುರೆ, ಪೋಸ್ಟ್‌ ಮಾಸ್ಟರ್ ಮಂಜುನಾಥ ಕಳಸೂರು ಇತರರು ಉಪಸ್ಥಿತರಿದ್ದರು.       

ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ 

ಹಾವೇರಿ 05 :  ನಗರ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳು ಬೇಸಿಗೆ ಶಿಬಿರ ನಡೆಸುತ್ತೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ  ಉಚಿತವಾಗಿ ಬೇಸಿಗೆ ಶಿಬಿರ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಆಲದಕಟ್ಟಿ ಗ್ರಾ.ಪಂ.ಅಧ್ಯಕ್ಷ ನಿಂಗಪ್ಪ ನಿಂಬಕ್ಕನವರ ಅವರು ಹೇಳಿದರು. 

ಆಲದಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶನಿವಾರ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಆಲದಕಟ್ಟಿ ಗ್ರಾಮ ಪಂಚಾಯತಿ ಅರಿವು ಕೇಂದ್ರ, ಅಗಸ್ತ್ಯ ಪೌಂಡೇಶನ್ ಹಾಗೂ ಆಶಾಕಿರಣ ಸಂಸ್ಥೆ ಸಹಯೋಗದಲ್ಲಿ  ಜರುಗಿದ  “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ” ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,  ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.  

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನಾಯಕ ಅಂಗಡಿ ಮಾತನಾಡಿ,  ಈ ಶಿಬಿರವು 15 ದಿನಗಳ ಕಾಲ  ನಡೆಯುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಸ್ನೇಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ದೇಶಿ ಆಟಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. 

ತರಬೇತಿ ಸಂಯೋಜಕ ಮುತ್ತುರಾಜ ಮಾದರ ಮಾತನಾಡಿ, ಮಗುವಿನಲ್ಲಿರುವ ಸೂಪ್ತ ಶಕ್ತಿ ಹೊರಹಾಕುವುದು, ಸಂವಹನ ಕೌಶಲ್ಯ , ಪರಿಸರ ಪ್ರಜ್ಞೆ , ಸಾಮಾಜಿಕ ಕಾಳಜಿ , ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಇದೆ. ನಮ್ಮೂರ ಶಾಲೆ ನಮ್ಮೇಲ್ಲರ ಶಾಲೆ ಎನ್ನುವ ಮನೋಭಾವನೆಯಿಂದ  ಈ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.  

ಎಸ್‌.ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀಮತಿ ನಯನಾ ಮಂಜುನಾಥ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ದಶಮನಿ, ಸಮೀರ ಯಲವದಹಳ್ಳಿ, ರುದ್ರೇಶ ಹಳ್ಳಿಕೇರಿ, ಎಸ್‌.ಎಡಿ.ಎಂ.ಸಿ.  ಸದಸ್ಯರಾದ  ಪೂರ್ಣಿಮಾ ದಶಮನಿ, ಶಂಭು ಗೌಡಪ್ಪನವರ, ಮಾಲತೇಶ ಕೋಳೂರು ಭಾಗವಹಿಸಿದ್ದರು. 

ಪ್ರಾಧಾನ ಗುರುಗಳಾದ ಗಂಗಾಧರ ಜಾವೂರ ಸ್ವಾಗತಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕ ಎಸ್ ಕೆ ಗೌಡಪ್ಪನವರ ವಂದಿಸಿದರು.  

ಓರ್ವ ಬಾಲಕ ಮತ್ತು ಇಬ್ಬರು  ಪುರುಷರು ಕಾಣೆ 

ಹಾವೇರಿ 05 :  ಹಾವೇರಿ ಶಹರದ ಹೊಸನಗರದ  12 ವರ್ಷದ ಹುಸೇನಸಾಬ ಶೇಕಶವಾಲೆ ಚುನ್ನವಾಲೆ  ಏಪ್ರಿಲ್ 29 ರಂದು ,  ಬಸವೇಶ್ವರಗರದ 29 ವರ್ಷದ ಮಂಜುನಾಥ ನಾಗಪ್ಪ ಮಡಿವಾಳರ  2024 ಡಿಸೆಂಬರ್ 28 ರಂದು ಹಾಗೂ  ಗುಡಸಗೇರಿ ಓಣಿ ನಿವಾಸಿ 44 ವರ್ಷದ  ಪ್ರವೀಣ ಬಸೇಟಪ್ಪ ಹಿಂಚಿಗೇರಿ  13 ಅಕ್ಟೋಬರ್ 2023 ರಂದು ಮನೆಯಿಂದ ಹೋದವರು ಕಾಣೆಯಾಗಿರುವುದಾಗಿ  ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಕಾಣೆಯಾದ ಬಾಲಕ ಹುಸೇನಸಾಬ 4.9 ಅಡಿ ಎತ್ತರ, ದುಂಡು ಮುಖ, ನೀಟಾದ ಮೂಗು, ಗೋದಿಕೆಂಪು ಮೈಬಣ್ಣ, ಅಗಲವಾದ ಹಣೆ, ಎಡಗೈ ಮುರಿದಸ್ಥಿತಿ ಬಾಗಿದ್ದು,  ಹಳದಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾಗಿ, ಮಂಜುನಾಥ  5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ,  ಬಿಳಿ ಮೈಬಣ್ಣ, ನೀಟಾದ ಮೂಗು ಹೊಂದಿದ್ದು, ಬಿಳಿ ಬಣ್ಣದ ಅಂಗಿ, ನೀಲಿ ಜೀನ್ಸ್‌ ಪ್ಯಾಂಟ್ ಧರಿದ್ದಾಗಿ ಹಾಗೂ  ಪ್ರವೀಣ 5.6 ಅಡಿ ಎತ್ತರ,  ತಳ್ಳನೆಯ ಮೈಕಟ್ಟು, ಕೋಲು ಮುಖ ಗೋದಿಗೆಂಪು ಮೈಬಣ್ಣ, ನೀಟಾದ ಮೂಗು ಹೊಂದಿದ್ದು,  ನೀಲಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು,  ಕನ್ನಡ, ಹಿಂದಿ, ತಮಿಳು ಹಾಗೂ ಉರ್ದು ಭಾಷೆ ಮಾತನಾಡುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಈ ಕಾಣೆಯದ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ಹಾವೇರಿ ಶಹರ ಠಾಣೆ 08375-232333, 9480804545, ಹಾವೇರಿ ಕಂಟ್ರೋಲ್ ರೂಮ್ ದೂ.08375-237368 ಹಾಗೂ ಪೊಲೀಸ್ ಅಧೀಕ್ಷಕರ ಕಚೇರಿ ದೂ.08375-232800 ಸಂಪರ್ಕಿಸಲು  ಹಾವೇರಿ ಶಹರ ಪೊಲೀಸ್ ಠಾಣೆ ಆರಕ್ಷಕ ಉಪ ನೀರೀಕ್ಷಕರು ತಿಳಿಸಿದ್ದಾರೆ.  

ಮೇ 6 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ 

ಹಾವೇರಿ 05 :  ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ಯ       ಮೇ 6 ರಂದು ಮಂಗಳವಾರ  ನೀರಲಗಿ 33 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಈ ವಿದ್ಯುತ್ ವಿತರಣಾಕೇಂದ್ರದ ವ್ಯಾಪ್ತಿಗೆ ಬರುವ ನೀರಲಗಿ, ಬೆಳವಿಗಿ, ಹಾಲಗಿ, ಕೆರೆಕೊಪ್ಪ, ಗೂಡುರು, ಮರೋಳ, ಗುಡಸಲಕೊಪ್ಪ, ಮೇವುಂಡಿ, ತೆರೆದಹಳ್ಳಿ, ಗುಯಿಲಗುಂದಿ, ಗಳಗನಾಥ,  ಹುಲ್ಯಾಳ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಈ ಫೀಡರನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ  ವಿದ್ಯುತ್ ಸರಬರಾಜಿನಲ್ಲಿ ಬೆಳಿಗ್ಗೆ 10 ರಿಂದ  ಸಾಯಂಕಾಲ 05-30 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಟೂಲ್‌ರೂಮ್ ಮಶಿನಿಷ್ಟ್‌ ಮತ್ತು ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್ ತಾಂತ್ರಿಕ ವೃತ್ತಿ ತರಬೇತಿ 

ಹಾವೇರಿ 05 :  ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹತ್ತನೇ ತರಗತಿ ಉತ್ತೀರ್ಣ ಮತ್ತು ಅನುತ್ತೀರ್ಣರಾದ ಯುವಕರಿಗೆ ಒಂದು ವರ್ಷದ ಟೂಲ್ ರೂಮ್ ಮಷಿನಿಷ್ಟ್‌ ಮತ್ತು ಹತ್ತನೇ ತರಗತಿ ಉತ್ತೀರ್ಣರಾದ ಯುವಕರಿಗೆ ಎರಡು ವರ್ಷ ಅವಧಿಯ ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್ ತಾಂತ್ರಿಕ ವೃತ್ತಿ ತರಬೇತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ. 

 ಈ ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉತ್ತಮ ಬೇಡಿಕೆಯಿರುತ್ತದೆ. ಒಂದೇ ಕೋರ್ಸಿನಲ್ಲಿ ಟರ್ನರ್, ಮಿಲ್ಲರ್, ಗ್ರೈಂಡರ್, ಫಿಟ್ಟರ್, ಸಿಎನ್‌ಸಿ, ಕ್ಯಾಡ್, ಕ್ಯಾಮ್ ಮತ್ತು ಟೂಲ್ ಆ್ಯಂಡ್ ಡೈ ಮೇಕಿಂಗ್ ಟ್ರೇಡುಗಳಲ್ಲಿ ಆನ್ ಜಾಬ್ ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರಕುತ್ತವೆ.  

ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರನ್ನು ಹೊಂದಿದೆ. ತರಬೇತಿಯ ನಂತರ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿ ಕೊಡಲಾಗುವುದು. ಕಳೆದ ವರ್ಷ ಜಿಟಿಟಿಸಿಯಲ್ಲಿ ಕೌಶಲ್ಯ ತರಬೇತಿ ಪಡೆದ ಎಲ್ಲ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ನೇಮಕಾತಿ ಹೊಂದಿರುತ್ತಾರೆ. 

ಆಸಕ್ತ ಅಭ್ಯರ್ಥಿಗಳು ದಿನಾಂಕ 31-05-2025 ರೊಳಗಾಗಿ ಅರ್ಜಿ ಸಲ್ಲಿಸಬೇಕು.  ತರಬೇತಿಗಳು ಜೂನ್ 10 ರಿಂದ ಪ್ರಾರಂಭವಾಗಲಿವೆ. ಆಸಕ್ತ ವಿದ್ಯಾರ್ಥಿಗಳು ಮತ್ತು ಪಾಲಕರು ಜಿಟಿಟಿಸಿ ಹಾನಗಲ್ಲ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶ ಪಡೆಯಬಹುದು.  

ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಸರ್ಕಾರಿ ಪಾಲಿಟೆಕ್ನಿಕ್ ಆವರಣ, ಪಾಳಾ ರಸ್ತೆ, ಹಾನಗಲ್ಲ-581104.       ದೂರವಾಣಿ  7411033510,  9845797583 , 7760323838 ಸಂಪರ್ಕಿಸಲು ಹಾನಗಲ್ ಜಿಟಿಟಿಸಿ ಪ್ರಾಂಶುಪಾಲ ಗೋಪಾಲ್ ಬಮ್ಮಿಗಟ್ಟಿ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೂರು ತಿಂಗಳ ಸ್ವಯಂ ಘೋಷಣೆಗೆ  ಸೂಚನೆ 

ಹಾವೇರಿ 05 :  ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ ಪದವಿ/ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಗಳನ್ನು 2022-23 ನೇ  ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದೆ. 

ಫಲಿತಾಂಶದ ನಂತರ ನಿರುದ್ಯೋಗಿಯಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ.  ಈ ಯುವನಿಧಿ ಯೋಜನೆ ಫಲಾನುಭವಿಗಳು  ಈ ಪ್ರಯೋಜನ ಪ್ರತಿ ತಿಂಗಳು ಪಡೆಯಲು ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಾಗಿಲ್ಲವೆಂದು  ಸ್ವಯಂ ಘೋಷಣೆಯನ್ನು ಪ್ರತಿ ತಿಂಗಳ ಬದಲಾಗಿ ಪ್ರತಿ ಮೂರು ತಿಂಗಳಿಗೊಮ್ಮೆ(ಮೇ, ಆಗಸ್ಟ್‌, ನವಂಬರ್ ಮತ್ತು ಫೆಬ್ರುವರಿ) ಸ್ವಯಂ ಘೋಷಣೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.  

ಅರ್ಹ ಫಲಾನುಭವಿಗಳು ಮಾರ್ಚ್‌, ಏಪ್ರಿಲ್ ಮತ್ತು ಮೇ  ಈ ಮೂರು ತಿಂಗಳುಗಳ ಪ್ರಯೋಜನ ಪಡೆಯಲು ಮೇ 25ರೊಳಗಾಗಿ ಮೂರು ತಿಂಗಳ ಸ್ವಯಂ ಘೋಷಣೆ ಮಾಡಬೇಕು.  ಸೇವಾಸಿಂಧು ಪೋರ್ಟಲ್(ಣಣಠಿ:/ಜತಛಿಟಿಜಜಡಿತಛಿ.ಞಚಿಡಿಚಿಟಿಚಿಣಚಿಞಚಿ.ರಠ.ಟಿ) ನಲ್ಲಿ ಸ್ವಯಂ ಘೋಷಣೆ ಪ್ರಮಾಣಪತ್ರ ಸಲ್ಲಿಸಲು ಅವಕಾಶ  ಕಲ್ಪಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಖುದ್ದಾಗಿ ಮತ್ತು  ದೂರವಾಣಿ ಸಂಖ್ಯೆ 08375-249291ನ್ನು  ಸಂಪರ್ಕಿಸಲು  ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.