ಲಕ್ನೋ, ಜ.13, ನವದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಷಯದಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದ ಪ್ರತಿಪಕ್ಷ ನಾಯಕರ ಸಭೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ, ಈಗ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಕೂಡ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜಸ್ತಾನ ಸರ್ಕಾರಕ್ಕೆ ಬಿಎಸ್‌ಪಿ ಬಾಹ್ಯ ಬೆಂಬಲ ನೀಡಿದ ನಂತರವೂ, ಅವರು ಎರಡನೇ ಬಾರಿಗೆ ನಮ್ಮ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿದ್ದಾರೆ, ಇದು ಅನೈತಿಕ ಎಂದು ಮಾಯಾವತಿ ಇಂದು ಟ್ವೀಟ್ ಮಾಡಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳುವುದು ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ನಿರಾಶೆಗೊಳಿಸುತ್ತದೆ. ಅದಕ್ಕಾಗಿಯೇ ಬಿಎಸ್‌ಪಿ ಸಭೆಯನ್ನು ಬಹಿಷ್ಕರಿಸುತ್ತದೆ ಎಂದು ಅವರು ಹೇಳಿದರು. ಆದಾಗ್ಯೂ, ಬಿಎಸ್‌ಪಿ, ಸಿಎಎ, ಎನ್ಆರ್‌ಸಿ ವಿರುದ್ಧವಾಗಿದೆ. ಈ ವಿಭಜಕ ಮತ್ತು ಅಸಂವಿಧಾನಿಕ ಕಾನೂನನ್ನು ಹಿಂಪಡೆದುಕೊಳ್ಳುವಂತೆ ಬಿಎಸ್‌ಪಿಯಿಂದ ಮತ್ತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಅಲ್ಲದೆ, ಜೆಎನ್‌ಯು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯಗೊಳಿಸುವುದು ದುರದೃಷ್ಟಕರ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಅದೇ ರೀತಿ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಈಗಾಗಲೇ ಸಭೆಯಿಂದ ದೂರವಿಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಎಎಪಿ, ಶಿವಸೇನೆ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ಕೂಡ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.