ಪುಣೆ, ಅ 10: ಕನ್ನಡಿಗ ಮಯಾಂಕ್ ಅಗರ್ವಾಲ್ (ಔಟಾಗದೆ 34 ರನ್) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರಿದ್ಧ ಉತ್ತಮ ಆರಂಭ ಕಂಡಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 25 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 77 ರನ್ ದಾಖಲಿಸಿದೆ. ನಿರಾಸೆ ಮೂಡಿಸಿದ ಹಿಟ್ಮನ್: ಮೊದಲನೇ ಪಂದ್ಯದ ಭರ್ಜರಿ ಯಶಸ್ಸಿನ ಉತ್ಸಾಹದಲ್ಲಿ ಗುರುವಾರ ಆರಂಭಿಕರಾಗಿ ಕಣಕ್ಕೆ ಇಳಿದ ಮಯಾಂಕ್ ಅಗರ್ವಾಲ್ ಹಾಗೂ ರೋಹಿತ್ ಜೋಡಿ ಬಹುಬೇಗ ಬೇರ್ಪಟ್ಟಿತು. ಕಳೆದ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಎರಡು ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ರೋಹಿತ್ ಶರ್ವಾ ಅವರು ಈ ಇನಿಂಗ್ಸ್ ನಲ್ಲಿ ನಿರಾಸೆ ಮೂಡಿಸಿದರು. 35 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಕಗಿಸೋ ರಬಡಾ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಬೇಸರದಿಂದ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಬರೆದಿದ್ದ ಮಯಾಂಕ್ ಅಗರ್ವಾಲ್ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಆರಂಭಿಕ ಜತೆಗಾರ ಬೇಗ ಕೈ ಕೊಟ್ಟರು ಬಹಳ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಮಯಾಂಕ್ ಹರಿಣಗಳ ಹೊಸ ಚೆಂಡಿನ ದಾಳಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. 80 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ ಅಜೇಯ 34 ರನ್ ಗಳಿಸಿ ಮಯಾಂಕ್ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಚೇತೇಶ್ವರ ಪೂಜಾರ ಅಜೇಯ19 ರನ್ ವಿಕೆಟ್ ಕಾಯ್ದುಕೊಂಡಿದ್ದಾರೆ. ಕಗಿಸೋ ರಬಾಡ ಮೊದಲನೇ ಅವಧಿಯಲ್ಲಿ ಒಂದು ವಿಕೆಟ್ ಕಿತ್ತಿದ್ದಾರೆ. ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ) ಭಾರತ ಪ್ರಥಮ ಇನಿಂಗ್ಸ್: 25 ಓವರ್ ಗಳಿಗೆ 77/1 (ಮಯಾಂಕ್ ಅಗರ್ವಾಲ್ ಔಟಾಗದೆ 34, ಚೇತೇಶ್ವರ ಪೂಜಾರ ಔಟಾಗದೆ 19; ಕಗಿಸೋ ರಬಡಾ 26 ಕ್ಕೆ 1)