ಇಂದೋರ್, ನ 15 : ಮಯಾಂಕ್ ಅಗರ್ವಾಲ್ (ಔಟಾಗದೆ 91 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ 38 ರನ್ ಮುನ್ನಡೆ ಲಭಿಸಿದೆ. ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 54 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 188 ರನ್ ದಾಖಲಿಸಿದೆ. ಇದರೊಂದಿಗೆ 38 ರನ್ ಮುನ್ನಡೆ ಸಾಧಿಸಿತು. ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ ಪೂಜಾರ ಜೋಡಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. 72 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅರ್ಧ ಶತಕ ಪೂರೈಸಿದ ಪೂಜಾರ ಇಂದು ಬಹುಬೇಗ ಅಬು ಝಾಯೆದ್ ಗೆ ವಿಕೆಟ್ ಒಪ್ಪಿಸಿದರು. ನಂತರ, ಕ್ರೀಸ್ಗೆ ಬಂದ ನಾಯಕ ವಿರಾಟ್ ಕೊಹ್ಲಿ ಝಾವೆದ್ ಗೆ ಶೂನ್ಯಕ್ಕೆ ಔಟ್ ಆದರು. ನಂತರ, ಜತೆಯಾದ ಅಜಿಂಕ್ಯಾ ರಹಾನೆ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಅತ್ಯುತ್ತಮ ಪ್ರದರ್ಶನ ತೋರಿತು. ಈ ಜೋಡಿ ಮುರಿಯದ ನಾಲ್ಕನೃ ವಿಕೆಟ್ಗೆ 69 ರನ್ ಗಳಿಸಿತು. ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್ 166 ಎಸೆತಗಳಲ್ಲಿ 91 ರನ್ ಗಳಿಸಿ ಶತಕದಂಚಿನಲ್ಲಿದ್ದಾರೆ. ಇವರ ಸೊಗಸಾದ ಇನಿಂಗ್ಸ್ ನಲ್ಲಿ ಒಂದು ಸಿಕ್ಸರ್ ಹಾಗೂ 14 ಬೌಂಡರಿಗಳಿದ್ದವು. ಇವರ ಜತೆ ಮತ್ತೊಂದು ತುದಿಯಲ್ಲಿ ಹೆಗಲು ನೀಡಿದ ಅಜಿಂಕ್ಯಾ ರಹಾನೆ 72 ಎಸೆತಗಳಲ್ಲಿ 35 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಎರಡನೇ ದಿನ ಅತ್ಯುತ್ತಮ ಬೌಲಿಂಗ್ ಮಾಡಿದ ಅಬು ಝಾವೆದ್ ಎರಡು ವಿಕೆಟ್ ಕಬಳಿಸಿದರು. ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ) ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 150 ಭಾರತ ಪ್ರಥಮ ಇನಿಂಗ್ಸ್: 54 ಓವರ್ ಗಳಿಗೆ 188/3 (ಮಯಾಂಕ್ ಅಗವರ್ಾಲ್ ಔಟಾಗದೆ 91, ಚೇತೇಶ್ವರ ಪೂಜಾರ 54, ಅಜಿಂಕ್ಯಾ ರಹಾನೆ ಔಟಾಗದೆ 35; ಅಬು ಝಾವೆದ್ 58 ಕ್ಕೆ 3).