ಮಂಗಳೂರು, ಆಗಸ್ಟ್ 18 ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಅಲ್ಲದಿದ್ದರೇ, ಅಮೆರಿಕ ಅಧ್ಯಕ್ಷ ಟ್ರಂಪ್ ಸಹಾಯ ಪಡೆದು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ ತನಿಖೆ ಮಾಡಿಸಲಿ ಜೆಡಿಎಸ್ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ತಿಳಿಸಿದ್ದಾರೆ. ನೆರೆಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳುವ ಮುನ್ನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ನನ್ನನ್ನು ಎಳೆದು ತಂದು ನನ್ನ ಬಗ್ಗೆ ಜನರಲ್ಲಿ ಅವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ನಾನು ಯಾವುದೇ ಕಾರಣಕ್ಕೂ ಮಾಧ್ಯಮಗಳ ಒತ್ತಡಕ್ಕೆ ಬಗ್ಗುವುದಿಲ್ಲ. ದೂರವಾಣಿ ಕದ್ದಾಲಿಕೆ ಸ್ಟೋರಿ ಮಾಡಿ ಮಾಧ್ಯಮಗಳು ಟಿಆರ್ ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿವೆ ಎಂದು ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಅವರು ಕಿಡಿಕಾರಿದರು.