ಕಾರವಾರ 11: ಬನವಾಸಿಯಲ್ಲಿ ಏಪ್ರಿಲ್ ಇಂದು ಮತ್ತು ನಾಳೆ ನಡೆಯುವ ಕದಂಬೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದನ್ನು ಜಿಲ್ಲೆಯ ಪ್ರತಿ ಮನೆಯ ಉತ್ಸವ ಎಂಬಂತೆ ಸಂಭ್ರಮದೊಂದಿಗೆ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಅವರು ಶುಕ್ರವಾರ ಕಾರವಾರಕ್ಕೆ ಆಗಮಿಸಿದ ಕದಂಬ ಜ್ಯೋತಿಯನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಿ ಮಾತನಾಡಿದರು.
ಕದಂಬೋತ್ಸವವು ನಾಡಿನ ಪ್ರಮುಖ ಉತ್ಸವವಾಗಿದ್ದು, ಇದನ್ನು ನಮ್ಮ ಜಿಲ್ಲೆಯಲ್ಲಿ ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬನವಾಸಿಯಲ್ಲಿ 2 ದಿನಗಳ ಕಾಲ ನಡೆಯುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ ಸೇರಿದಂತೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಕದಂಬೋತ್ಸವವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿರು ಮತ್ತಿತರರು ಉಪಸ್ಥಿತರಿದ್ದರು.