ನವದೆಹಲಿ, ಫೆ.12: ಮೊಣಕೈ ಗಾಯದಿಂದಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ಮ್ಯಾಕ್ಸ್‌ವೆಲ್ ಬದಲಿಗೆ ಡಿ'ಆರ್ಸಿ ಶಾರ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಇದನ್ನು ಬುಧವಾರ ಖಚಿತಪಡಿಸಿದೆ. ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ವೇಳೆ ಗ್ಲೆನ್ ಗೆ ಮೊಣಕೈ ಸಮಸ್ಯೆ ಇತ್ತು, ನಂತರ ನೋವು ಹೆಚ್ಚಾದಾಗ ಅವರು ಸ್ಕ್ಯಾನ್‌ಗೆ ಒಳ ಪಟ್ಟರು.
ಸ್ಕ್ಯಾನ್ ವರದಿಯು ಅವರ ಮೊಣಕೈಗೆ ಗಾಯವಾಗಿದೆ ಎಂದು ದೃಢಪಡಿಸಿದೆ. ಮ್ಯಾಕ್ಸ್‌ವೆಲ್ ಶಸ್ತ್ರಚಿಕಿತ್ಸೆಗೆ ಒಳ ಪಡಲಿದ್ದು, ಎಂಟು ವಾರಗಳ ಕಾಲ ಅವರು ಅಂಗಳದಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಮಾರ್ಚ್ ಅಂತ್ಯದಲ್ಲಿ ಆರಂಭವಾಗುವ ಐಪಿಎಲ್ ನ ಆರಂಭಿಕ ಪಂದ್ಯ ಆಡುವುದು ಅನುಮಾನ.
"ಆಸ್ಟ್ರೇಲಿಯಾ ಪರ ಆಡುವುದು ಗೌರವ. ಗಾಯದಿಂದಾಗಿ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದು, ನನಗೆ ಬೆಂಬಲ ನೀಡಿದ ಜಸ್ಟಿನ್ ಲ್ಯಾಂಗರ್, ಬೆನ್ ಆಲಿವರ್, ಟ್ರೆವರ್ ಹೊನ್ಸ್ ಮತ್ತು ಇಡೀ ಆಸ್ಟ್ರೇಲಿಯಾ ತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ” ಎಂದು ಮ್ಯಾಕ್ಸ್ ವೆಲ್ ತಿಳಿಸಿದ್ದಾರೆ.
ಮ್ಯಾಕ್ಸ್‌ವೆಲ್ ಅವರ ಹೊರ ನಡೆದಿದ್ದು, ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಬಿಎಲ್‌ನಲ್ಲಿ ಮೂರು ಅರ್ಧಶತಕ ಒಳಗೊಂಡಂತೆ ಪಂದ್ಯಾವಳಿಯಲ್ಲಿ ಅವರು 39.80 ರ ಸರಾಸರಿಯಲ್ಲಿ 398 ರನ್ ಗಳಿಸಿದ್ದರು.