ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ: 16 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು, ಫೆ.7,ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, 16 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‌ನ ಎರಡು ತಂಡಗಳ ಮಾಲೀಕರು ಮತ್ತು   ಆರು ಮಂದಿ ಆಟಗಾರರು ಸೇರಿದಂತೆ 16 ಮಂದಿಯ ವಿರುದ್ಧ ಪ್ರಾಥಮಿಕ ದೋಷಾರೋಪಣಾ  ಪಟ್ಟಿಯನ್ನು ಸಲ್ಲಿಸಲಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಜಂಟಿ ಪೊಲೀಸ್  ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ

 ಮ್ಯಾಚ್‌ ಫಿಕ್ಸಿಂಗ್ ಗೆ ಸಂಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿತ್ತು. ಈ  ಸಂಬಂಧ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ  ಮುಸ್ತಾಕ್ ಆಲಿ, ಬಳ್ಳಾರಿ  ಟಸ್ಕರ್ ತಂಡದ ಮಾಲೀಕ ಅರವಿಂದ ವೆಂಕಟೇಶ ರೆಡ್ಡಿ,  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ  (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯರು ಹಾಗೂ ಬೆಳಗಾವಿ ಪ್ಯಾಂಥರ್ಸ್‌ನ  ತರಬೇತುದಾರರಾಗಿದ್ದ  ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ ತಂಡದ ನಾಯಕ  ಸಿ.ಎಂ.ಗೌತಮ್,  ವಿಕೆಟ್ ಕೀಪರ್ ಅಬ್ರಾಹರ್ ಕಾಜಿ ಮತ್ತು  ಬುಕ್ಕಿ ಅಮಿತ್ ಮಾವಿ ಸೇರಿ 16 ಜನರ ವಿರುದ್ಧ  ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಭಾರತೀನಗರ ಪೊಲೀಸ್  ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೌಲಿಂಗ್ ಕೋಚ್ ವಿನುಪ್ರಸಾದ್,  ಬ್ಯಾಟ್ಸ್‌ಮನ್ ಎಂ.ವಿಶ್ವನಾಥ್, ಆಟಗಾರರಾದ ನಿಶಾಂತ್ ಸಿಂಗ್ ಶೇಖಾವತ್, ಮೋಹಂತಿ,  ಬುಕ್ಕಿಗಳಾದ  ವೆಂಕಿ ಮತ್ತು ಕಿರಣ್ ಅವರ ವಿರುದ್ಧ  ಪ್ರಕರಣ ದಾಖಲಾಗಿದೆ.ಜೆ.ಪಿ.ನಗರ  ಪೊಲೀಸ್ ಠಾಣೆಯಲ್ಲಿ 4 ಜನ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬುಕ್ಕಿಯಾಗಿದ್ದ ಜತಿನ್ ಸೇಥಿ, ಭವೇಶ್ ಬಫ್ನಾ, ಸನ್ಯಾಮ್  ಗುಲಾಟಿ ವಿರುದ್ಧ  ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಸಿಸಿಬಿ ಈ ಎಲ್ಲಾ  ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದು,  ಸದ್ಯಕ್ಕೆ ಜಾಮೀನಿನ ಮೇಲೆ ಎಲ್ಲರೂ  ಬಿಡುಗಡೆಗೊಂಡಿದ್ದಾರೆ. ಬಹು ಕೋಟಿ ರೂ.ಗಳ ಈ ಹಗರಣದ ತನಿಖೆಯಲ್ಲಿ ಪ್ರಾಥಮಿಕ ಹಂತದ  ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.