ತಾಳಿಕೋಟಿ 09: ಮುದ್ದೇಬಿಹಾಳ, ತಾಳಿಕೋಟಿ ತಾಲೂಕು ವ್ಯಾಪ್ತಿಯಲ್ಲಿ ತೊಗರಿ ಬೆಳೆ ಹಾನೀಗೀಡಾದ ರೈತರಿಗೆ ಸೂಕ್ತ ಪರಿಹಾರ, ಕಳಪೆ ಬೀಜ ಪೂರೈಸಿದ ಏಜೆನ್ಸಿ ಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ. ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ರೈತ ಮುಖಂಡರು ತೊಗರಿ ಬೆಳೆಗಾರರು ಸೋಮವಾರ ಟ್ರ್ಯಾಕ್ಟರ್ ಸಮೇತ ಬೃಹತ್ ಹೋರಾಟ ನಡೆಸಿದರು.
ಪಟ್ಟಣದ ಹುಣಸಗಿ, ದೇಹಿಪ್ಪರಗಿ,ವಿಜಯಪುರ ಈ ಮೂರು ಮಾರ್ಗಗಳಿಂದ ಸಾವಿರಾರು ರೈತರು ತಮ್ಮ ಟ್ರಾಕ್ಟರ್ ಸಮೇತ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ ತೊಗರಿ ಬೆಳೆ ಹಾನಿಯಿಂದಾಗಿ ರೈತರಿಗಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲು ಹಾಗೂ ಕಳಪೆ ಬೀಜ ಪೂರೈಸಿದ ಏಜೆನ್ಸಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಡಿ.3ರಿಂದ ನಾವು ಹೋರಾಟವನ್ನು ನಡೆಸುತ್ತಿದ್ದೇವೆ ಆದರೆ ಇಲ್ಲಿವರೆಗೆ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಸೂಕ್ತ ಸ್ಪಂದನೆ ನೀಡಿಲ್ಲ, ಜಿಲ್ಲೆಯ ಉಸ್ತುವಾರಿ ಸಚಿವರು ಎಲ್ಲಿದ್ದಾರೆಂದು ಯಾರಿಗೂ ತಿಳಿದಿಲ್ಲ ಇದೊಂದು ರೈತ ವಿರೋಧಿ, ಕಣ್ಣು ಕಿವಿಗಳು ಇಲ್ಲದ ಸರ್ಕಾರ ಮುಂದಿನ ದಿನಗಳಲ್ಲಿ ಇವರಿಗೆ ರೈತರ ಶಾಪ ತಟ್ಟಲಿದೆ ಎಂದ ಅವರು ಕೂಡಲೇ ಅಧಿಕಾರಿಗಳು ರೈತರ ಬೆಳೆಗಳ ಸಮೀಕ್ಷೆಯನ್ನು ನಡೆಸಿ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಬೇಕು ಹಾಗೂ ರೈತರಿಗೆ ಕಳಪೆ ಬೀಜ ಪೂರೈಸಿದ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ, ಮುಖಂಡರಾದ ಗಂಗಾಧರ ನಾಡಗೌಡ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಮಲಕೇಂದ್ರಾಯಗೌಡ ಬಿರಾದಾರ, ಕೆಂಚಪ್ಪ ಬಿರಾದಾರ ಮಾತನಾಡಿ ಪರಿಹಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂ.ಎಸ್ ಪಾಟೀಲ ನಾಲತವಾಡ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ, ಮುಖಂಡರಾದ ವಾಸುದೇವ ಹೆಬಸೂರ, ಎಂ.ಎಂ. ಪಾಟೀಲ, ರಾಜುಗೌಡ ಶಿವಶಂಕರ ಹಿರೇಮಠ, ಮಡು ಸಾಹುಕಾರ, ಕೋಳೂರ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಪ್ರಕಾಶ ಹಜೇರಿ, ಮುರಿಗೆಪ್ಪ ಸರಶೆಟ್ಟಿ, ಕಾಶಿನಾಥ ಮುರಾಳ,ಗುಂಡಕನಾಳ ರಾಜುಗೌಡ, ಮುದುಕಪ್ಪ ಬಡಿಗೇರ, ಪ್ರಭು ಬಿಳೆಭಾವಿ, ನಿಂಗಣ್ಣ ಕುಂಟೋಜಿ, ಜೈಸಿಂಗ್ ಮೂಲಿಮನಿ, ಜಗದೀಸಶ ಬಿಳೆಭಾವಿ, ದ್ಯಾಮನಗೌಡ ಪಾಟೀಲ, ಗಂಗಾರಾಮಸಿಂಗ್ ಕೊಕಟನೂರ, ನದೀಮ್ ಕಡು ಮತ್ತಿತರರು ಇದ್ದರು.